ರಾಮನಗರ: ನಾನು ಕಾಂಗ್ರೆಸ್ ಗೆ ಹೋಗ್ತೀನಿ ಅಂತಾ ನಿಮ್ಮ ಬಳಿ ಬಂದು ಹೇಳಿದ್ದೇನಾ? ನಾನು ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ನನ್ನದೇ ಆದ ನಿಬಂಧನೆಗಳಿವೆ, ನನ್ನದೇ ಆದ ನಿರ್ಧಾರ, ಅನುಭವಗಳಿವೆ. ನಾನು ಹಳ್ಳಿಯಿಂದ ಬಂದವನು, ಸುಮಾರು 45 ವರ್ಷಗಳ ಕಾಲ ಮಣ್ಣು ಹೊತ್ತಿದ್ದೇನೆ. ಒಳ ಹಂತದಲ್ಲಿ ಕೆಲವೊಂದು ಏನೇನೋ ಚರ್ಚೆ ಆಗುತ್ತಿರುತ್ತವೆ. ಈ ಬಗ್ಗೆ ಹೆಚ್ಚು ಒತ್ತು ನೀಡಬೇಡಿ ಎಂದು ಮನವಿ ಮಾಡಿದರು.
ವದಂತಿಗಳಿಗೆ ನಾನು ಉತ್ತರ ಕೊಡೋದಿಲ್ಲ, ಸುಖಾ ಸುಮ್ಮನೆ ಸುಳ್ಳು ಸುದ್ದಿ ಹರಡಬಾರದು, ಕೆಲಸವನ್ನ ದೇವರಾಗಿ ನೋಡಿದ್ದೇನೆ. ನನಗೆ ಯಾಕೆ ಅಷ್ಟು ಧೈರ್ಯ ಅಂದರೆ ಒಂದು ಸಣ್ಣ ಅಪಚಾರ ಆಗಲು ಬಿಟ್ಟಿಲ್ಲ. ನಾನು ಬೆಂಗಳೂರಿಗೆ ಬಂದಿದ್ದು ಹೊಟ್ಟೆ ಪಾಡಿಗೆ. ಹೀಗಾಗಿ ನಮ್ಮ ಅನುಭವಕ್ಕೆ ತಕ್ಕಂತೆ ನೋವು ಇರುತ್ತದೆ. ಇದನ್ನು ಹೇಳಿಕೊಳ್ಳಲು ಆಗುತ್ತದೆಯಾ? ಮನಸ್ಸು, ಆರೋಗ್ಯ ಎರಡು ಸರಿ ಇಲ್ಲ ಕಾರಣ ನಾನು ಜಿಲ್ಲಾ ಉಸ್ತುವಾರಿಯಾಗಿರುವ ಚಾಮರಾಜನಗರದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಗೆ ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಚಿವ ವಿ ಸೋಮಣ್ಣಗೆ ಬಿಜೆಪಿ ಮೇಲೆ ಅಸಮಾಧಾನ ಉಂಟಾಗಿದ್ದು, ಮರಳಿ ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗುತ್ತಿದೆ ಎಂಬ ಸುದ್ದಿಗೆ ಇದೀಗ ಸ್ವತ: ಸ್ಪಷ್ಟನೆ ಕೊಟ್ಟಿದ್ದಾರೆ.