ಬೆಂಗಳೂರು: ನಾನು ಯಾವತ್ತಾದ್ರೂ ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ ? ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ ಎಂದು ಸಚಿವ ವಿ. ಸೋಮಣ್ಣ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದ್ರೆ ನಮಗೂ ಬೇಡ. ನನಗೆ ಅಸಮಾಧಾನ ಇದೆ ಅಂತ ಎಲ್ಲಾದ್ರೂ ಹೇಳಿದ್ದೀನಾ? ಎಂದು ಪ್ರಶ್ನಿಸಿದರು.
ರಾಜಕಾರಣದಲ್ಲಿ ಕವಲುದಾರಿಗಳು ಇರುತ್ತವೆ. ನಾನೇನು ಸನ್ಯಾಸಿ ಅಲ್ಲ. ಡಿಕೆಶಿ, ಸಿದ್ದರಾಮಯ್ಯ ನಾವೆಲ್ಲ ಸ್ನೇಹಿತರು. ನಾವು ಒಟ್ಟಿಗೆ ಕೆಲಸ ಮಾಡಿದ್ದೀವಿ. ಅವರ ಕೆಲಸ ಅವರು ಮಾಡ್ತಾರೆ, ನನ್ನ ಕೆಲಸ ನಾನು ಮಾಡ್ತೀನಿ. ನನಗೆ ಅಸಮಾಧಾನ ಇದೆ ಅಂತಾ ನಾನು ಹೇಳಿಲ್ಲ ಎಂದರು.
ನನ್ನ ಬೆಂಗಳೂರಿಗೆ ಮಾತ್ರ ಏಕೆ ಸೀಮಿತ ಮಾಡ್ತೀರಾ ? ನನಗೆ ಕೊಟ್ಟ ಜವಾಬ್ದಾರಿಗಳೆಲ್ಲವನ್ನೂ ನಿರ್ವಹಿಸಿದ್ದೇನೆ. ಉಪಚುನಾವಣೆಗಳ ಜವಾಬ್ದಾರಿ, ತುಮಕೂರು ಲೋಕಸಭೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೇನೆ. ನಾನು ಮೊದಲು ಕಾಂಗ್ರೆಸ್‍ನಲ್ಲೇ ಇದ್ದೆ, ಜನತಾಪಾರ್ಟಿ, ಜನತಾದಳದಲ್ಲೂ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನೂ ಇದೇ ವಿಚಾರವಾಗಿ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ಸೋಮಣ್ಣ ಬೇಜಾರಾಗೋದು ಬೇಡ, ಸೋಮಣ್ಣಗೆ ಬೇಜಾರಿದೆ ಅನ್ನೋದು ಊಹಾಪೋಹ, ಸೋಮಣ್ಣ ಬಿಜೆಪಿಯ ಉನ್ನತ ನಾಯಕರು. ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾದ ನಂತರ ಹಲವು ಜವಾಬ್ದಾರಿಗಳನ್ನು ನೀಡಲಾಗಿದೆ. ಬಿಜೆಪಿಯ ಹಿರಿಯರಿಗೆ ಸಿಗದ ಸ್ಥಾನಗಳೂ ಸೋಮಣ್ಣಅವರಿಗೆ ಸಿಕ್ಕಿದೆ. ಅವರು ಉಪ ಚುನಾವಣೆಯಲ್ಲಿ ಸೋತಿದ್ದರೂ ಅವರನ್ನು ಎಮ್ಎಲ್ಸಿ ಮಾಡಲಾಗಿದೆ ಅವರು ತಮ್ಮ ಕ್ಷೇತ್ರದ ಕಡೆ ಗಮನ ಕೊಡುತ್ತಿದ್ದಾರೆ ಎಂದು ತಿಳಿಸಿದರು.