ಬೆಂಗಳೂರು: ಚಿನ್ನದಂತ ನನ್ನ ಕ್ಷೇತ್ರ ಬಿಟ್ಟು ಹೈಕಮಾಂಡ್ ಆದೇಶದಂತೆ ಹೋಗಿ ಸ್ಪರ್ಧಿಸಿ ಸೋತೆ, ನಾನೀಗ ನಿರುದ್ಯೋಗಿ ಎಂದು ವಿ ಸೋಮಣ್ಣ ಭಾವುಕರಾಗಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ಈ ಬಾರಿಯ ವಿಧಾನಸಭೆ ಚುನಾವಣೆ ಮತದಾನದ ಫಲಿತಾಂಶದಲ್ಲಿ ವರುಣಾ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದೇನೆ, ಸೋತಾಗಿದೆ ಏನು ಮಾಡಲಿ ? ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದ್ದೆ. ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡೆ, ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳಿತೆಂದು ಹೋದೆ. ಇದೀಗ ಜನ ತೀರ್ಮಾನ ಮಾಡಿದ್ದಾರೆ.
ಚೆನ್ನಾಗಿ ದುಡಿಯುತ್ತಿದ್ದ ನಾನು ಈಗ ನಿರುದ್ಯೋಗಿಯಾಗಿದ್ದೇನೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಎಂದಿದ್ದಾರೆ. ಎಲ್ಲರಂತೆ ನನಗೂ ಆಸೆಯಿದೆ, ಮಗನಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೆ. ಕೊಡಲಿಲ್ಲ, ಎಲ್ಲ ವಿಧಿನಿಯಮದಂತೆ ಆಗಿದೆ ಎಂದು ಬೇಸರದಿಂದ ಹೇಳಿಕೊಂಡರು.ನಾನು ಕೆಲಸಗಾರ, ಈಗ ನಿರುದ್ಯೋಗಿ ಆಗಿದ್ದು, ಸೋಲನ್ನು ಒಪ್ಪಿಕೊಂಡಿದ್ದೇನೆ. ಒಳ್ಳೆಯವರನ್ನು ಯಾರೂ ಗುರುತಿಸಲ್ಲ. ಸೋತ ಮಾತ್ರಕ್ಕೆ ರಾಜಕೀಯ ನಿವೃತ್ತಿ ಇಲ್ಲ. ನಾನು ಸಾಯೋತನಕ ಸಕ್ರಿಯ ರಾಜಕಾರಣದಲ್ಲಿರುತ್ತೇನೆ ಎಂದರು.
ಚಿನ್ನದಂತಹ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಹೋಗಿ ಈಗ ನಿರುದ್ಯೋಗಿಯಾಗಿದ್ದೇನೆ. ಪಕ್ಷಕ್ಕೂ ಹಿನ್ನಡೆ ಆಗಿದ್ದು, ನಮಗೆಲ್ಲ ಒಂದು ಎಚ್ಚರಿಕೆ ಗಂಟೆಯಾಗಿದೆ. ಜನರು ನೀಡಿರುವ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು ಎಂದು ಸೋಲು ಒಪ್ಪಿಕೊಂಡರು.