ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲ್ಲ, ಕ್ಷೇತ್ರ ಬದಲಾವಣೆಯೂ ಇಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಈಗಾಗಲೇ ಗೋವಿಂದರಾಜನಗರ ಕ್ಷೇತ್ರವಿದೆ, ಕೆಲಸ ಮಾಡಲು ಚಾಮರಾಜನಗರ ಕ್ಷೇತ್ರವಿದೆ. ಹಾಗಾಗಿ ಮತ್ತೊಂದು ಕ್ಷೇತ್ರದ ಅಗತ್ಯ ನನಗಿಲ್ಲ ಎಂದರು. 45 ವರ್ಷಗಳ ಕಾಲ ರಾಜಕಾರಣದಲ್ಲಿ ಮಣ್ಣು ಹೊತ್ತಿದ್ದೇನೆ. ಸ್ವತಂತ್ರವಾಗಿ ಬೆಂಗಳೂರಲ್ಲಿ ಗೆದ್ದಿದ್ದೇನೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷದಿಂದ ನಿಂತು ನಾನು ಗೆದ್ದಿದ್ದೇನೆ. ನನಗೆ ಇನ್ನು ಏನೂ ಆಗಬೇಕಾಗಿಲ್ಲ. ನಾನು ಇನ್ನೊಬ್ಬರನ್ನು ತೃಪ್ತಿ ಪಡಿಸುವ ಅಗತ್ಯ ಇಲ್ಲ, ನನಗೆ ಅನಿಸಿದ್ದನ್ನು ನಾನು ಮಾಡಿದ್ದೇನೆ. ಅಂತಿಮವಾಗಿ ಸ್ವೀಕಾರ ಮಾಡೋದು ಪಕ್ಷಕ್ಕೆ ಬಿಟ್ಟಿದ್ದು, ಆದರೆ ನಾನೊಬ್ಬ ಶಿಸ್ತಿನ ಸಿಪಾಯಿ, ಸುಳ್ಳು ಹೇಳಿಕೊಂಡು ಯಾವತ್ತಿಗೂ ನಾನು ರಾಜಕಾರಣ ಮಾಡಿಲ್ಲ ಎಂದು ತಿಳಿಸಿದರು.
ಪಕ್ಷ ಈ ರೀತಿ ಮಾಡು ಅಂತಾ ಹೇಳಿದೆ. ಅದನ್ನು ನಾನು ಮಾಡ್ಡಿದ್ದೇನೆ, ಪಕ್ಷ ಬೇಡ ಅಂದರೆ ಸುಮ್ಮನೆ ಆಗುತ್ತೇನೆ ಎಂದು ವಿಜಯ ಸಂಕಲ್ಪ ರಥಯಾತ್ರೆ ಕಡೆ ಸೋಮಣ್ಣ ಗಮನ ಕೊಡದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದರು.