ದಾವಣಗೆರೆ : ವಾಲ್ಮೀಕಿ ಜಾತ್ರೆಯಲ್ಲಿ ಮಾಡಿದ ಗಲಾಟೆಗೂ , ಕಿಚ್ಚ ಸುದೀಪ್ ರಿಗೂ ಯಾವುದೇ ಸಂಬಂಧವಿಲ್ಲ ಎಂದು ಸುರಪುರ ಶಾಸಕ ರಾಜುಗೌಡ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ನೆಚ್ಚಿನ ನಟ ಸುದೀಪ್ ವಾಲ್ಮೀಕಿ ಜಾತ್ರೆಗೆ ಆಗಮಿಸಲಿಲ್ಲ ಎನ್ನುವ ಕಾರಣಕ್ಕೆ ಕುರ್ಚಿಗಳನ್ನು ಹೊಡೆದು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರುತ್ತಾರೆ ಎಂದು ಸುತ್ತಲಿನ ಅಭಿಮಾನಿಗಳು ಸುದೀಪ್ ಫೋಟೋ ಹಿಡಿದು ಜಯಘೋಷ ಮಾಡುತ್ತಿದ್ದರು ಎಂದರು.
ಸುದೀಪ್ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಸುದೀಪ್ ಅವರಿಗೆ ಆಹ್ವಾನವಿದ್ದರೆ ಯಾವುದೇ ಕಾರಣಕ್ಕೂ ತಪ್ಪಿಸುತ್ತಿರಲಿಲ್ಲ ಎಂದು ನಟನ ಬೆನ್ನಿಗೆ ನಿಂತಿದ್ದಾರೆ. ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸುದೀಪ್ ಬರಲಿದ್ದಾರೆ ಎಂದು ಸುದ್ದಿ ಆಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಸಂಜೆಯಾದರೂ ಸುದೀಪ್ ಬಾರದೇ ಇರೋದ್ರಿಂದ ಅಭಿಮಾನಿಗಳು ಆಕ್ರೋಶ ಹೊರಹಾಕಿದರು ಎಂದರು.
ಇನ್ನೂ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು, ‘ನನಗೆ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನವಿರಲಿಲ್ಲ ಮತ್ತು ಕಾರ್ಯಕ್ರಮದ ಬಗ್ಗೆ ಗೊತ್ತೂ ಇರಲಿಲ್ಲ. ಒಪ್ಪಿಕೊಂಡ ಕಾರ್ಯಕ್ರಮವನ್ನು ನಾನು ಯಾವತ್ತೂ ತಪ್ಪಿಸಲಿಲ್ಲ ಎಂದು ಬರೆದುಕೊಂಡಿದ್ದಾರೆ.