ಕೋಲಾರ : ಶ್ರೀನಿವಾಸಗೌಡರೇ ತಿಂಗಳ ಹಿಂದೆ ನಿಮಗೆ ಸರಕಾರದಿಂದ ಬಂದ 25 ಕೋಟಿ ರೂ. ವಿಶೇಷ ಅನುದಾನವನ್ನು ಏನು ಮಾಡಿದ್ದೀರಾ? ಯಾರಿಗೆ ಕೆಲಸಗಳನ್ನು ನೀಡಿದ್ದೀರಾ ಎಂಬ ಮಾಹಿತಿ ಕೊಡಿ. ಇಲ್ಲವೇ ನಾನೇ ಬಿಡುಗಡೆ ಮಾಡ್ತೀನಿ ಎಂದು ಶಾಸಕ ಶ್ರೀನಿವಾಸಗೌಡಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಪ್ರಶ್ನಿಸಿದ್ದಾರೆ.
ಸಭೆಯಲ್ಲಿ ಮಾತನಾಡಿ, ನಗರದ ಪ್ರಮುಖ ರಸ್ತೆಗಳು ಹಾಳಾಗಿದ್ದು, ಜನವರಿ 10ರೊಳಗೆ ನಿಮ್ಮಿಂದಾದರೆ ಸರಿ ಮಾಡಿಸಿ. ಇಲ್ಲವೇ, ಜನವರಿ 15ರಿಂದ ನಗರದ ಎಲ್ಲ ರಸ್ತೆಗಳಿಗೆ ನಾನೇ ಡಾಂಬರೀಕರಣ ಮಾಡಿಸ್ತೀನಿ ಎಂದರು. ವಿಶೇಷ ಅನುದಾನ ಮುಖ್ಯಮಂತ್ರಿಗಳ ಪರಮಾಧಿಕಾರ, ಅವರು ಯಾರಿಗೆ ಬೇಕಾದರೂ ನೀಡಬಹುದು. ಮುಖ್ಯಮಂತ್ರಿಗಳ ಕೈ-ಕಾಲು ಹಿಡಿದು ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಆದರೆ, ಇವರೂ ಅಭಿವೃದ್ಧಿ ಮಾಡುತ್ತಿಲ್ಲ, ನಾನು ಮಾಡಲು ಹೋದರೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಗೌಡ್ರೇ ನಾನು ರಸ್ತೆ ಕೆಲಸಗಳನ್ನು ಮಾಡಿಸಿದ ಬಳಿಕ ಟೀಕೆ ಮಾಡಬಾರದು. ಮುಖ್ಯಮಂತ್ರಿಗಳು 10 ಕೋಟಿ ರೂ. ವಿಶೇಷ ಅನುದಾನ ನೀಡಿದ್ದು, ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುವ ಕೆಲಸವನ್ನು ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.