ಬಾಗಲಕೋಟೆ: ಹೆಚ್ ಡಿ ಕುಮಾರಸ್ವಾಮಿ, ಜಾತಿಯ ಮೇಲೆ ಮಾತಾಡೋದು ಶೋಭೆ ತರಲ್ಲ, ಜಾತ್ಯಾತೀತ ಹೆಸರು ಇಟ್ಟುಕೊಂಡಿದ್ದಾರೆ, ಈ ಜಾತಿ ಬಗ್ಗೆ ಯಾಕೆ ಮಾತಾಡುತ್ತಾರೆ ಎಂದು ಶಾಸಕ ವೀರಣ್ಣ ಚರಂತಿಮಠ ಟಾಂಗ್ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬ್ರಾಹ್ಮಣರಲ್ಲಿ ಒಡಕು ಮೂಡಿಸುವುದು ತಪ್ಪು. ಜಾತಿ, ಉಪಜಾತಿ ಇದರ ಬಗ್ಗೆ ಮಾತಾಡಬಾರದು. ಇವೆಲ್ಲ ಸೂಕ್ಷ್ಮ ಇರುತ್ತವೆ. ಎಲ್ಲರಿಗೂ ಅವರವರ ಧರ್ಮ, ಮತ ದೊಡ್ಡದು. ರಾಜಕೀಯದಲ್ಲಿ ಇದ್ದವರು ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಕಲಿಯಬೇಕು. ಹತಾಶರಾಗಿ ಏನೇನೋ ಹೇಳಿಕೆ ಕೊಟ್ಟು ಜನರನ್ನು ತಪ್ಪು ದಾರಿಗೆ ಎಳೆಯಬಾರದು ಎಂದರು.
ಯಡಿಯೂರಪ್ಪ ಅವರಿಗೆ ಅವರನ್ನು ಯಾರು ಕಡೆಗಣಿಸಿಲ್ಲ. ಬಿಎಸ್‌ವೈ ನಮಗೆ ವರಿಷ್ಠ ನಾಯಕರು. ಬಿಎಸ್‌ವೈ, ಜಗದೀಶ್ ಶೆಟ್ಟರ್ ಸೈಡ್ ಲೈನ್ ಆಗಿಲ್ಲ.ಆಗುವುದೂ ಇಲ್ಲ. ಎಚ್‌ಡಿಕೆ ಹೇಳಿಕೆಯಿಂದ ಬಿಜೆಪಿಯಲ್ಲಿ ತಲ್ಲಣ ಆಗಿಲ್ಲ ಎಂದು ತಿಳಿಸಿದರು.
ಇನ್ನು ಬ್ರಾಹ್ಮಣ ಸಿಎಂ ಎಂಬ ಎಚ್‌ಡಿಕೆ ಹೇಳಿಕೆಯಿಂದ ಬಿಜೆಪಿಯಲ್ಲಿ ಏನೂ ಗೊಂದಲ ಆಗಲ್ಲ. ಹೈಕಮಾಂಡ್ ಸುಭದ್ರ, ಸ್ಟ್ರಾಂಗ್ ಇದೆ. ಎಲ್ಲಾ ರೀತಿಯಿಂದ ವಿಚಾರ ಮಾಡಿ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ಎಲ್ಲರೂ ಬದ್ದ ಎಂದು ಹೇಳಿದರು.