ಬೆಂಗಳೂರು : ಚಂದ್ರಯಾನ-3ರ ಯಶಸ್ಸಿನ ಹಿನ್ನೆಲೆ ಇಸ್ರೋ ವಿಜ್ಞಾನಿಗಳ ತಂಡಕ್ಕೆ ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿನಂದನೆ ಸಲ್ಲಿಸಿದ್ದಾರೆ.
ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ವಿಶೇಷ ಪತ್ರ ಬರೆದಿರುವ ವೀರೇಂದ್ರ ಹೆಗ್ಗಡೆ, ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್‌ನ ಮೂಲಕ ಗಮನಾರ್ಹ ಸಾಧನೆ ಮಾಡಿರುವ ನಿಮಗೆ ಮತ್ತು ಇಡೀ ಇಸ್ರೋ ವಿಜ್ಞಾನಿಗಳ ತಂಡಕ್ಕೆ ನನ್ನ ಹೃದಯಾಂತರಾಳದ ಅಭಿನಂದನೆಗಳು. ನಿಮ್ಮ ಸಮರ್ಪಣೆ, ಪರಿಣಿತಿ ಮತ್ತು ಕಠಿಣ ಪರಿಶ್ರಮ ಬಾಹ್ಯಾಕಾಶ ಸಂಶೋಧನೆ ಮತ್ತು ವೈಜ್ಞಾನಿಕ ಪ್ರಗತಿಯಲ್ಲಿ ಭಾರತ ತನ್ನ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದೆ ಎಂದು ಹೇಳಿದ್ದಾರೆ.
ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್ ನಿಮ್ಮ ವರ್ಷಗಳ ಪರಿಶ್ರಮ, ನಿಖರವಾದ ಯೋಜನೆ, ಇಂಜಿನಿಯರಿಂಗ್ ಸಾಮರ್ಥ್ಯ ಮತ್ತು ಟೀಮ್ ವರ್ಕ್ ಅನ್ನು ಪ್ರತಿ ಬಿಂಬಿಸುತ್ತದೆ. ಈ ಯೋಜನೆ ಮಾನವ ಜ್ಞಾನ ಮತ್ತು ಸಂಶೋಧನೆಯ ಗಡಿಗಳನ್ನು ದಾಟಿದೆ. ನಿಮ್ಮೆಲ್ಲರ ಬದ್ಧತೆ ನಿಜವಾಗಿಯೂ ಸ್ಪೂರ್ತಿದಾಯಕ ಎಂದು ವೀರೇಂದ್ರ ಹೆಗ್ಗಡೆ ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ : ಇಸ್ರೋ ಕೇಂದ್ರಕ್ಕೆ ಸಿಎಂ ಭೇಟಿ; ವಿಜ್ಞಾನಿಗಳಿಗೆ ಸಿಹಿಹಂಚಿ ಅಭಿನಂದನೆ!
ಭಾರತದ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ನಿನ್ನೆ (ಆಗಸ್ಟ್ 23) ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವಾಗಿ ಭಾರತ ಹೊರ ಹೊಮ್ಮಿದೆ.
ಚಂದ್ರನ ಮೇಲೆ ಮೂರ್ನಾಲ್ಕು ದೇಶಗಳು ತಲುಪಿದ್ದರೂ, ದಕ್ಷಿಣ ಧ್ರುವದಲ್ಲಿ ರೋವರ್ ಇಳಿಸುವ ಸಾಹಸ ಯಾರೂ ಮಾಡಿರಲಿಲ್ಲ. ಭಾರತ ಮೊಟ್ಟ ಮೊದಲ ಬಾರಿಗೆ ಈ ಸಾಹಸ ಮಾಡಿ ಜಾಗತಿಕ ಬಾಹ್ಯಾಕಾಶ ವಿಜ್ಞಾನದಲ್ಲಿ ನವ ಇತಿಹಾಸ ಬರೆದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.