ನವದೆಹಲಿ : ನಾಳೆಯಿಂದ (ಸೆ.18) ಸಂಸತ್ತಿನ ವಿಶೇಷ ಅಧಿವೇಶನ ಪ್ರಾರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ಇಂದು ಉಪ ರಾಷ್ಟ್ರಪತಿ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ನೂತನ ಸಂಸತ್ ಭವನದ ಮುಂಭಾಗ ರಾಷ್ಟ್ರ ಧ್ವಜಾರೋಹಣ ಮಾಡಿದರು.
ಸಮಾರಂಭದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ವಿ. ಮುರಳೀಧರನ್ ಮತ್ತು ಉಭಯ ಸದನಗಳ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ : ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಹೊರಟು ನಿಂತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು
ಧ್ವಜಾರೋಹಣದ ಬಳಿಕ ಮಾತನಾಡಿದ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಇದೊಂದು ಐತಿಹಾಸಿಕ ಕ್ಷಣ. ಭಾರತವು ಯುಗ ಬದಲಾವಣೆಗೆ ಸಾಕ್ಷಿಯಾಗ್ತಿದೆ. ವಿಶ್ವವು ಭಾರತದ ಶಕ್ತಿ ಮತ್ತು ಕೊಡುಗೆಯನ್ನು ಗುರುತಿಸುತ್ತಿದೆ. ನಾವು ಕನಸು ಕಂಡಂತಹ ಭಾರತದ ಅಭಿವೃದ್ಧಿ ಮತ್ತು ಸಾಧನೆಗಳು ಕಣ್ಣಾರೆ ನೋಡುತ್ತಿದ್ದೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಗೈರು : ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಧ್ವಜಾರೋಹಣಕ್ಕೆ ಗೈರಾಗಿದ್ದರು. ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎರಡು ದಿನಗಳ ಸಭೆಗಾಗಿ ಹೈದರಾಬಾದ್‌ನಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಈ ಬಗ್ಗೆ ಶನಿವಾರ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಚಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಖರ್ಗೆ, ತಡವಾಗಿ ಆಹ್ವಾನ ನೀಡಿದಕ್ಕೆ ಬೇಸರ ವ್ಯಕ್ತಪಡಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.