ಬೆಂಗಳೂರು: ಯಾರಾದರೂ ಉದಾಸೀನ ಮಾಡಿದರೆ ಅಂಥ ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ನೀಡಿದರು.
ಮೊದಲ ಪಟ್ಟಿಯಲ್ಲಿರುವ 93 ಅಭ್ಯರ್ಥಿಗಳ ಸಭೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಮಾತನಾಡಿ, ಚುನಾವಣೆಗೆ ಕೇವಲ ಇನ್ನೆರಡು ತಿಂಗಳು ಮಾತ್ರ ಇದ್ದು, ಯಾವಾಗ ಬೇಕಾದರೂ ಚುನಾವಣೆ ದಿನಾಂಕ ಪ್ರಕಟ ಆಗಬಹುದು. ಆದ್ದರಿಂದ ಎಲ್ಲ ಘೋಷಿತ ಅಭ್ಯರ್ಥಿಗಳು ವೇಗವಾಗಿ ಜನರನ್ನು ತಲುಪುವ ಕೆಲಸ ಮಾಡಬೇಕು ಎಂದರು.
ಪಂಚರತ್ನ ಯೋಜನೆಗಳ ಬಗ್ಗೆ ಮನೆ ಮನೆಗೂ ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ಸು ಮಾಡಬೇಕು. ಜನರಿಗೆ ವಿಶ್ವಾಸ ಬರುವಂತೆ ವರ್ತಿಸಿ, ಆ ರೀತಿಯಲ್ಲಿ ಮಾಹಿತಿ ನೀಡಿ ಎಂದು ಹೇಳಿದರು. ಮುಂದಿನ ಎರಡೂವರೆ ತಿಂಗಳು ಅಭ್ಯರ್ಥಿಗಳು ವಾರಕ್ಕೆ ಕೊನೆಯ ಪಕ್ಷ ಮೂರು ದಿನ ವಿವಿಧ ಗ್ರಾಮಗಳಲ್ಲಿ ವಾಸ್ತವ್ಯ ಹೂಡಬೇಕು ಎಂದು ಅಭ್ಯರ್ಥಿಗಳಿಗೆ ತಾಕೀತು ಮಾಡಿದರು.
ನನ್ನ ಆರೋಗ್ಯ ಲೆಕ್ಕಿಸದೆ ರಥಯಾತ್ರೆ ನಡೆಸುತ್ತಿದ್ದೇನೆ. ನನ್ನ ಆರೋಗ್ಯಕ್ಕಿಂತ ಜನರ ಹಿತ ಮುಖ್ಯ , ಕೆಲ ಅಭ್ಯರ್ಥಿಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಇನ್ನು ಕೆಲವರು ಇನ್ನೂ ಟೇಕಾಫ್ ಆಗಿಲ್ಲ ಎಂದು ಟೇಕಾಫ್ ಆಗದ ಅಭ್ಯರ್ಥಿಗಳಿಗೆ ಚಾಟಿ ಬೀಸಿದರು.