ಹುಬ್ಬಳ್ಳಿ : ದ್ವೇಷದಿಂದ ನಾವು ಬಿಜೆಪಿ ಸರ್ಕಾರದ ಹಗರಣಗಳನ್ನು ತನಿಖೆ ಮಾಡ್ತಿಲ್ಲ, ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಪಾರದರ್ಶಕ ಆಡಳಿತ ಕೊಡುತ್ತೇವೆ ಎಂದು ಜನರಿಗೆ ವಾಗ್ದಾನ ಮಾಡಿದ್ದೇವೆ. ಹಾಗಾಗಿ, ಬಿಜೆಪಿ ಅವಧಿಯ ಹಗರಣಗಳ ತನಿಖೆಗೆ ಆದೇಶಿಸಿದ್ದೇವೆ. ಕಾಟಾಚಾರಕ್ಕೆ ಈ ತನಿಖೆ ನಡೆಯುತ್ತಿಲ್ಲ. ತಪ್ಪು ಯಾರು ಮಾಡಿದ್ದರೋ ಅವರಿಗೆ ಶಿಕ್ಷೆ ಆಗಲೇಬೇಕು ಎಂದರು.
ಇನ್ನೂ ತನಿಖೆಯೇ ಆರಂಭಗೊಂಡಿಲ್ಲ, ಆಗಲೇ ದ್ವೇಷದ ರಾಜಕಾರಣ ಅಂದ್ರೆ ಹೇಗೆ?. ಬಿಜೆಪಿಯವರು ನಮ್ಮನ್ನೇ ಟಾರ್ಗೆಟ್ ಮಾಡ್ತಿದಾರೆ ಅಂತ ಯಾಕೆ ಅಂದುಕೊಳ್ಳಬೇಕು. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ. 40% ಭ್ರಷ್ಟಾಚಾರ ಆಗಿದೆ ಅನ್ನೋದು ಜಗಜ್ಜಾಹೀರಾಗಿದೆ. ಅದರ ಬಗ್ಗೆ ತನಿಖೆ ಮಾಡ್ತಿದ್ದೇವೆ. ನಮಗೆ ಯಾರನ್ನೂ ಟಾರ್ಗೆಟ್ ಮಾಡುವ ದುರುದ್ದೇಶ ಇಲ್ಲ ಎಂದು ಹೇಳಿದರು.
ಸಚಿವ ಶರಣ ಪ್ರಕಾಶ್ ಪಾಟೀಲ್ ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆ ಚಿತ್ರದುರ್ಗದ ಜಿಮ್ಸ್ ಗೆ ಭೇಟಿ ನೀಡಿದ್ದ ಸಚಿವರು, ಇಂದು ಗದಗದ ಜಿಮ್ಸ್ ಮತ್ತು ಹುಬ್ಬಳ್ಳಿಯ ಕಿಮ್ಸ್ ಗೆ ಭೇಟಿ ನೀಡಿ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.