ಬೆಂಗಳೂರು: ಸರ್ಕಾರದ ಯೋಜನೆ ಕುರಿತು ಅಪಪ್ರಚಾರ ಮಾಡಿದ್ದ ಆರೋಪದಡಿ ಹಿಂದಿ ಸುದ್ದಿ ವಾಹಿನಿ ಆಜ್‌ತಕ್‌ನ ಪ್ರಧಾನ ಸಂಪಾದಕ ಸುಧೀರ್ ಚೌದರಿ ವಿರುದ್ಧ ಬೆಂಗಳೂರಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಸುಳ್ಳು ಸುದ್ದಿ, ದ್ವೇಷ ಹರಡುವವರ ಹತ್ತಿಕ್ಕುವುದಾಗಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ (ಎಕ್ಸ್) ಮಾಡಿರುವ ಅವರು, ‘ಸ್ವಾವಲಂಬಿ ಸಾರಥಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನ ಖರೀದಿಗೆ ಶೇ.50 ರಷ್ಟು ಗರಿಷ್ಠ ರೂ. 3 ಲಕ್ಷದ ವರೆಗೆ ಸಹಾಯಧನ ನೀಡಲಾಗುತ್ತಿದೆ’.
ಇದನ್ನೂ ಓದಿ: ಜನ-ಜಾನುವಾರುಗಳನ್ನು ಸಂಕಷ್ಟಕ್ಕೆ ದೂಡಿ ನೀರು ಹರಿಸಲು ಸಾಧ್ಯವಿಲ್ಲ: ಸಿಎಂ
ಧರ್ಮಬೇಧವಿಲ್ಲದೆ ನಿರುದ್ಯೋಗ ನಿವಾರಣೆ ಮಾಡಬೇಕೆಂಬ ಸದುದ್ದೇಶದ ಯೋಜನೆಗೆ ಕೋಮುಬಣ್ಣ ಬಳಿದು, ಇದನ್ನು ಅಲ್ಪಸಂಖ್ಯಾತರಿಗೆ ಮಾತ್ರ ನೀಡಲಾಗುತ್ತಿದೆ, ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಸುಳ್ಳು ಸುದ್ದಿ ಬಿತ್ತರಿಸಿದ “ಆಜ್ ತಕ್” ನ ಪ್ರಧಾನ ಸಂಪಾದಕ ಸುಧೀರ್ ಚೌದರಿ ಹಾಗೂ ಆಡಳಿತ ಮಂಡಳಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದಿದ್ದಾರೆ.
ಸುಳ್ಳು ಸುದ್ದಿಗಳ ಮೂಲಕ ಧರ್ಮಗಳ ನಡುವೆ ದ್ವೇಷ ಬಿತ್ತಿ, ಸಮಾಜದ ಸೌಹಾರ್ದತೆ ಮತ್ತು ಸ್ವಾಸ್ಥ್ಯ ಕದಡಲು ಯತ್ನಿಸುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ನಾವು ಸಹಿಸುವವರಲ್ಲ. ರಚನಾತ್ಮಕ ಟೀಕೆ ಟಿಪ್ಪಣಿಗಳಿಗೆ ನಮ್ಮದು ತೆರೆದ ಮನಸ್ಸು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವೈಯಕ್ತಿಕ ತೇಜೋವಧೆ, ಸುಳ್ಳು, ದ್ವೇಷ ಹರಡುವುದನ್ನು ನೋಡುತ್ತಾ ಕೈಕಟ್ಟಿ ಕೂರುವುದಿಲ್ಲ, ಕಾನೂನಿನ ಮೂಲಕ ತಕ್ಕ ಉತ್ತರ ನೀಡಲು ನಿಶ್ಚಯಿಸಿದ್ದೇವೆ ಎಂದು ಖಡಕ್ ಸೂಚನೆ ರವಾನಿಸಿದ್ದಾರೆ.
ಇದನ್ನೂ ಓದಿ: ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ವಿಷ ಜಂತು : ಸಚಿವ ಸುರೇಶ್
ಸುಧೀರ್ ಚೌದರಿ ಹೇಳಿದ್ದೇನು?
ಕರ್ನಾಟಕ ಸರ್ಕಾರವು ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನ ಖರೀದಿಗೆ ಶೇ.50 ರಷ್ಟು ಗರಿಷ್ಠ ರೂ. 3 ಲಕ್ಷದ ವರೆಗೆ ಸಹಾಯಧನ ನೀಡಲಾಗುತ್ತಿದೆ. ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮಾತ್ರ ಆರ್ಥಿಕ ಸಹಾಯಧನವನ್ನು ನೀಡುತ್ತದೆ ಮತ್ತು ಹಿಂದೂಗಳಿಗೆ ಅನ್ಯಾಯ ಮಾಡಿದೆ. ವಾಹನ ಖರೀದಿ ಯೋಜನೆಯೂ ಅಲ್ಪಸಂಖ್ಯಾತರಿಗಾಗಿ ಮಾತ್ರ ನೀಡಲಾಗಿದ್ದು, ‘ಅಲ್ಪಸಂಖ್ಯಾತ ತುಷ್ಟೀಕರಣ’ ಎಂದು ಕರೆದಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.