ಬಾಗಲಕೋಟೆ: ವಿಜ್ಞಾನಿಗಳಿಂದ ನಾವು ವೈಜ್ಞಾನಿಕತೆ ನಿರೀಕ್ಷೆ ಮಾಡ್ತೀವಿ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಂದ್ರಯಾನ್-3 ಯಶಸ್ವಿಯಾಗಿ ಗುರಿ ತಲುಪಿದ್ದು ಭಾರತಕ್ಕೆ ಒಳ್ಳೆಯ ಹೆಸರು ತಂದಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ನಮ್ಮ ವಿಜ್ಞಾನಿಗಳು ಒಳ್ಳೆಯ ಹೆಸರು ಮಾಡಿದ್ದಾರೆ. ಅಮೇರಿಕ, ರಷ್ಯಾ, ಚೀನಾ ನಂತರ ಅದರಲ್ಲೂ ಭಾರತ ಚಂದ್ರನ ದಕ್ಷಿಣ ದ್ರುವಕ್ಕೆ ಹೋಗಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
‘ನಾವು ವಿಜ್ಞಾನಿಗಳಿಂದ ವೈಜ್ಞಾನಿಕತೆಯನ್ನು ನಿರೀಕ್ಷೆ ಮಾಡ್ತೀವಿ. ಆದರೆ ವಿಜ್ಞಾನಿಗಳು ತಿರುಪತಿ-ತಿರುಮಲ ದೇವಾಲಯಕ್ಕೆ ದರ್ಶನ ಪಡೆದಿರುವುದು ಜೊತೆಗೆ ಮಿನಿ ಚಂದ್ರಯಾನ ಮಾದರಿ ತೆಗೆದುಕೊಂಡು ಹೋಗಿದ್ದು ವಿಪರ್ಯಾಸ. ವಿಜ್ಞಾನಿಗಳೇ ಅವರ ಕೆಲಸದ ಮೇಲೆ ನಂಬಿಕೆ ಇಟ್ಟುಕೊಂಡಿಲ್ಲ ಅಂದ್ರೆ ನಾವು ಹೇಗೆ ವಿಜ್ಞಾನದ ಮೇಲೆ ನಂಬಿಕೆ ಇಡಬೇಕು ಎಂಬ ಪ್ರಶ್ನೆ ಬರುತ್ತೆ’ ಎಂದಿದ್ದಾರೆ.
ಇದನ್ನೂ ಓದಿ: ಬ್ಯಾರಿಕೇಡ್ ಹಿಂದೆ ನಿಂತ ಬಿಜೆಪಿಗರು; ಮತದಾರರು, ಕನ್ನಡಿಗರಿಗೆ ಅವಮಾನ ಎಂದ ಖರ್ಗೆ
‘ನಮಗೆ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಕುವೆಂಪು ಅಷ್ಟೇ ಏಕೆ ನಮ್ಮ ಸಂವಿಧಾನ ಕೂಡ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದಿದೆ. ವೈಜ್ಞಾನಿಕತೆ ಯೋಚನೆಯಿಂದ ನಮ್ಮ ದೇಶವನ್ನು ಇನ್ನೂ ಮುಂದೆ ತೆಗೆದುಕೊಂಡು ಹೋಗಬಹುದು ಎನಿಸುತ್ತಿದೆ. ಆದರೆ ಅವೈಜ್ಞಾನಿಕ ಆಲೋಚನೆಗಳಿಂದ ಇದು ಸಾಧ್ಯವಿಲ್ಲ’ ಎಂದಿದ್ದಾರೆ.
‘ಮೋದಿಯವ್ರ ಆಲೋಚನೆಗಳಲ್ಲಿ ಬಹಳ ಭಿನ್ನಾಭಿಪ್ರಾಯವಿದೆ’
ಪ್ರಧಾನಿ ಮೋದಿ ಅವರ ಸಿದ್ಧಾಂತ ನಾನು ಒಪ್ಪಲ್ಲ, ಹಿಂದೂ ಧರ್ಮ ನಾನು ಒಪ್ಪಲ್ಲ. ಅವರ ಆಲೋಚನೆಗಳಲ್ಲಿ ಬಹಳ ಭಿನ್ನಾಭಿಪ್ರಾಯವಿದೆ. ಆನೆಯ ತಲೆ ಕಡಿದು ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿತ್ತು. ಭಾರತದಲ್ಲಿ ಹಿಂದೆಯೇ ಪ್ಲಾಸ್ಟಿಕ್ ಸರ್ಜರಿ ಜಾರಿಯಿತ್ತು ಎಂದು ಆಸ್ಪತ್ರೆ ಉದ್ಘಾಟನೆಯಲ್ಲೇ ಹೇಳಿದ್ರು. ಅವರಿಗೆ ವೈಜ್ಞಾನಿಕತೆಯಲ್ಲಿ ನಂಬಿಕೆಯಿಲ್ಲ ಹಾಗಾಗಿ ಅವರು ಹೇಳಿದ್ದರಲ್ಲಿ ನನಗೇನು ಆಶ್ಚರ್ಯವಿಲ್ಲ. ಆದ್ರೆ ವಿಜ್ಞಾನಿಗಳಲ್ಲಿ ನಾನು ವೈಜ್ಞಾನಿಕತೆಯ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಳ್ಳುತ್ತೇನೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.