ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಿತು. ವಿಪಕ್ಷಗಳ ಪ್ರಮುಖ ನಾಯಕರ ಗೈರು ಹಾಜರಿಯ ನಡುವೆಯೂ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ.
ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮಗೆ ನೀರಿನ ಕೊರತೆ ಇದೆ. ಸರಿಯಾದ ಪ್ರಮಾಣದಲ್ಲಿ ಮಳೆ ಆಗಿಲ್ಲ. ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿದೆ. ನಾವು ನೀರು ನಿಯಂತ್ರಣ ಸಮಿತಿಗೆ ಮತ್ತೊಂದು ಅರ್ಜಿ ಹಾಕ್ತೇವೆ. ಸುಪ್ರೀಂ ಕೋರ್ಟ್ ಗೆ ವಾಸ್ತವಾಂಶ ತಿಳಿಸುತ್ತೇವೆ. ಇಂದು ಡಿ.ಕೆ ಶಿವಕುಮಾರ್ ಕಾನೂನು ಸಮಿತಿ ಜೊತೆ ದೆಹಲಿಗೆ ಹೋಗ್ತಾರೆ. ಕೋರ್ಟ್ ಗೆ ಅರ್ಜಿ ಹಾಕುವ ಕುರಿತು ಮಾತನಾಡಲಿದ್ದಾರೆ ಎಂದರು.
ಇದನ್ನೂ ಓದಿ : ಸರ್ವಪಕ್ಷ ಸಭೆಗೆ ಬಿಜೆಪಿ-ಜೆಡಿಎಸ್ ನಾಯಕರು ಗೈರು
ವಿಪಕ್ಷಗಳು ನೀರು ಬಿಡಬೇಡಿ ಅಂದರೂ, ನಮಗೆ ಕಾನೂನಿನ ತೊಡಕಿದೆ. ನಮ್ಮ ಬೆಳೆಗಳಿಗೆ ನೀರಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಪ್ರಧಾನಿಗೆ ಒಂದು ಪತ್ರ ಕೂಡ ಬರೆದು ಭೇಟಿಗೆ ಸಮಯ ಕೇಳಿದ್ದೇವೆ. ಆದರೆ, ಅವರು ಇದುವರೆಗೆ ಸಮಯ ಕೊಟ್ಟಿಲ್ಲ. ನಾವು ಇನ್ನೊಂದು ಪತ್ರ ಬರೆದು ಸಮಯ ಕೇಳ್ತೇವೆ. ಇಂದಿನ ಸಭೆಯಲ್ಲಿ ಬಿಜೆಪಿ ಸಂಸದರು ಕೂಡ ಒತ್ತಡ ಹಾಕ್ತೀವಿ ಅಂತ ಹೇಳಿದ್ದಾರೆ. ಸೆಪ್ಟೆಂಬರ್ 18 ರಿಂದ ಸಂಸತ್ ಅಧಿವೇಶನ ಪ್ರಾರಂಭ ಆಗಲಿದೆ. ಕೇಂದ್ರದಲ್ಲಿ ಮಂತ್ರಿಯಾಗಿರುವ ನಮ್ಮ ಸಂಸದರ ಬಳಿಯೂ ಮಾತಾಡ್ತೀವಿ. ನಮ್ಮಲ್ಲಿ ನೀರಿಲ್ಲ ಮನವರಿಕೆ ಮಾಡುತ್ತೇವೆ ಎಂದು ಹೇಳಿದರು.
ಸಭೆ ಬಳಿಕ ಟ್ವೀಟ್ ಮಾಡಿರುವ ಸಿಎಂ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಬಿಡಬೇಕು. ಆದರೆ, ದುರದೃಷ್ಟವಶಾತ್ ಸಂಕಷ್ಟ ಹಂಚಿಕೆ ಸೂತ್ರವಿಲ್ಲದ ಕಾರಣ ನಾವು ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದೇವೆ. ಈವರೆಗೆ 99 ಟಿಎಂಸಿ ನೀರು ಕೊಡಬೇಕಾಗಿತ್ತು. 37.7 ಟಿಎಂಸಿ ನೀರು ಬಿಡಲಾಗಿದೆ. ಈಗಲೂ ನೀರು ಬಿಡಲಾಗದೆ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ 70 ಟಿಎಂಸಿ ನೀರು ಬೆಳೆ ಉಳಿಸಿಕೊಳ್ಳಲು ಬೇಕು. 33 ಟಿಎಂಸಿ ಕುಡಿಯುವ ನೀರಿಗಾಗಿ ಬೇಕು. ಜೊತೆಗೆ 3 ಟಿಎಂಸಿ ಕೈಗಾರಿಕೆಗಳಿಗೆ ಬೇಕು. ಆದರೆ ಈಗ ನಾಲ್ಕೂ ಜಲಾಶಯಗಳಿಂದ ಲಭ್ಯವಿರುವುದು 53 ಟಿಎಂಸಿ ನೀರು ಮಾತ್ರ. ಬೆಳೆಗಳಿಗೆ ಕಟ್ಟುನೀರು ಬಿಡಲಾಗುತ್ತಿದೆ. ಇದರಲ್ಲಿ ನಾವು 33 ಟಿಎಂಸಿ ಕುಡಿಯುವ ನೀರಿಗೆ ಹಾಗೂ 3 ಟಿಎಂಸಿ ಕೈಗಾರಿಕೆಗಳಿಗೆ ಒದಗಿಸಬೇಕಾಗುತ್ತದೆ. ಬೆಳೆಗಳಿಗೆ ಸಾಕಾಗುವುದಿಲ್ಲ ಎಂದಿದ್ದಾರೆ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.