ಬೆಂಗಳೂರು : ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್‌ನ ಒಮಿಕ್ರೋನ್ ತಳಿಯ ಹೊಸ ರೂಪಾಂತರಿ ಬಿಕ್ಯು.1 ಪತ್ತೆಯಾಗಿದ್ದು, ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಒಂದು ಕೇಸ್ ಪತ್ತೆಯಾಗಿದೆ. ನಮ್ಮಲ್ಲಿ ಕೇಸ್ ಪತ್ತೆಯಾಗಿಲ್ಲ, ಆದರೂ ಗಡಿ ಜಿಲ್ಲೆಗಳಿಗೆ ವಿಸ್ತೃತವಾದ ಮಾರ್ಗಸೂಚಿ ನೀಡಿದ್ದೇವೆ ಎಂದರು. ರಾಜ್ಯದಲ್ಲಿ ಸದ್ಯಕ್ಕೆ ಓಮಿಕ್ರಾನ್ ಆತಂಕ ಇಲ್ಲ, ನಮ್ಮಲ್ಲಿ ಓಮಿಕ್ರಾನ್ ರೂಪಾಂತರ ಪತ್ತೆಯಾಗಿಲ್ಲ ಎಂದು ತಿಳಿಸಿದರು.
ಹೊಸ ತಳಿ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ನೆಗಡಿ, ಗಂಟಲು ಕೆರೆತ, ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ಹತ್ತಿರದ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್ ಟೆಸ್ಟ್ ನಡೆಸಿ ಫಲಿತಾಂಶ ದೊರೆಯುವವರೆಗೂ ಸ್ವಯಂ ಪ್ರತ್ಯೇಕವಾಸ ಇರಬೇಕು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ತಕ್ಷಣವೇ ಹತ್ತಿರದ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿನೆ ನೀಡಲಾಗಿದ್ದು ಮಾಸ್ಕ್ ಕಡ್ಡಾಯಗೊಳಿಸುವ ಸಂದರ್ಭ ಬಂದಿಲ್ಲ ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕನ ಮಾಡುತ್ತಿದ್ದೇವೆ, ಮೂರನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು.
ಇನ್ನು ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಹೊಸ ತಳಿ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದೆ. ಗುಂಪು ಸೇರುವಿಕೆಯಿಂದ ದೂರ ಇರುವುದು, ಮೂರನೇ ಡೋಸ್ ಲಸಿಕೆ ಪಡೆಯುವುದ ಹಾಗೂ ಮಾಸ್ಕ್ ಧರಿಸುವುದು ಸೇರಿಂತೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ. ಯಾರೂ ಕೂಡಾ ನಿರ್ಲಕ್ಷ್ಯ ವಹಿಸಬಾರದು, ಶೀತ, ಜ್ವರ ಬಂದರೆ ಒಮ್ಮೆ ಚೆಕ್ ಮಾಡಿಸಿ ಮತ್ತು ಸರಿಯಾದ ನಿಯಮ ಪಾಲಿಸಿ ಎಂದು ಸೂಚಿಸಲಾಗಿದೆ.