ಬೆಂಗಳೂರು: ಬಿಜೆಪಿ ಸರ್ಕಾರ ಅನೈತಿಕ ಮಾರ್ಗದಿಂದ ಬಂದ ಅನೈತಿಕ ಸರ್ಕಾರವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರದ ವಿರುದ್ದ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದೇವೆ. ಈ ಆರೋಪ ಪಟ್ಟಿಗೆ ಪಾಪದ ಪುರಾಣ ಅಂತ ನಾಮಕರಣ ಮಾಡಿದ್ದೇವೆ , 2018ರಲ್ಲಿ ಜನರು ಏನೂ ಆಶೀರ್ವಾದ ಮಾಡಿರಲಿಲ್ಲ. 104 ಸ್ಥಾನ ಮಾತ್ರ ಬಂದಿತ್ತು, ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ರಾಜ್ಯದ ಜನರಿಗೆ ವಕ್ಕರಿಸಿಕೊಂಡರು ಎಂದು ಕಿಡಿಕಾರಿದರು.
ಅಧಿಕಾರಿಗಳು ಜನರು ಬಿಜೆಪಿಯಿಂದ ಬೇಸತ್ತು ಹೋಗಿದ್ದಾರೆ. ದ್ವೇಷದ ರಾಜಕಾರಣದಿಂದ ಬಿಜೆಪಿಯವರು ರಾಜ್ಯವನ್ನು ಈ ದುಸ್ಥಿತಿಗೆ ತಂದಿದ್ದಾರೆ ಎಂದು ತಿಳಿಸಿದರು. ಜನರನ್ನು ಭೇಟಿ ಮಾಡಿ ಅವರ ಧ್ವನಿ ಆಗಬೇಕು ಅಂತ ನಾವು ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಜಿಲ್ಲಾ ಮಟ್ಟದಲ್ಲಿ ರಥಯಾತ್ರೆ ಮಾಡುತ್ತಿದ್ದೇವೆ. ಸಮಯದ ಕಡಿಮೆಯಿಂದ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯರ ನೇತೃತ್ವದಲ್ಲಿ ಒಂದು ಟೀಂ, ನನ್ನ ಹಾಗೂ ಹಿರಿಯರ ಇನ್ನೊಂದು ತಂಡ ಯಾತ್ರೆ ಮಾಡುತ್ತೇವೆ.
ಉತ್ತರ ಕರ್ನಾಟಕದ ಭಾಗದಲ್ಲಿ ನಾನು ಮೊದಲು ಯಾತ್ರೆ ಮಾಡುತ್ತೇನೆ. ಡಿಕೆಶಿಯವರು ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಬರುತ್ತಾರೆ. ಎಲ್ಲ ಕ್ಷೇತ್ರದ ಮೂಲೆ ಮೂಲೆಗೆ ಬೇಟಿ ಕೊಟ್ಟು ಎಲ್ಲವನ್ನೂ ಜನರಿಗೆ ತಿಳಿಸುತ್ತೇವೆ ಎಂದರು.
ಬೊಮ್ಮಾಯಿ ಅವರು ಬರೀ ಭ್ರಷ್ಟ ಅಷ್ಟೇ ಅಲ್ಲ, ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಯಾರಪ್ಪ ಅಂದರೆ ಅದು ಬೊಮ್ಮಾಯಿ ಎಂದು ವಾಗ್ದಾಳಿ ನಡೆಸಿದರು.