ಹಾಸನ : ನಾವು ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತಿದೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಚುನಾವಣೆಗೂ ಮುನ್ನ ಹೇಳಿದಂತೆ ಈಗ ಅನುಷ್ಠಾನ ಮಾಡುತ್ತಿದ್ದೇವೆ. ನಾವು ರಾಜ್ಯದ ಅಭಿವೃದ್ಧಿಗಾಗಿ ಸಾಮಾಜಿಕ ನ್ಯಾಯದ ಮೇಲೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಬಳಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ನಿರೀಕ್ಷೆಯಂತೆ ಇದೇ ತಿಂಗಳ30 ರಂದು ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್‌ಗಾಂಧಿ ಚಾಲನೆ ನೀಡಲಿದ್ದಾರೆ. ಅದೇ ದಿನ ಫಲಾನುಭವಿಗಳ ಖಾತೆಗೆ ಹಣ ತಲುಪುತ್ತದೆ, ಇನ್ನು ಮುಂದೆ ಪ್ರತಿ ತಿಂಗಳು ಹಣ ಸಂದಾಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಮುಂದಿನ ತಿಂಗಳಿಂದ ‘ಆಶಾಕಿರಣ ಯೋಜನೆ’ ಜಾರಿ: ಸಚಿವ ದಿನೇಶ್ ಗುಂಡೂರಾವ್
ಪ್ರಣಾಳಿಕೆ ಸಮಿತಿಯ ಅಧ್ಯಕ್ಷನಾಗಿ ನಾನು ಹೇಳಿದಂತೆ ಈಗ ನಡೆಯುತ್ತಿದೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕಾರ್ಯ ಸ್ವಲ್ಪ ಸ್ಥಗಿತವಾಗಿರಬಹುದು, ಆದರೆ ಜನರಿಗೆ ಅನುಕೂಲವಾಗುವ ಯಾವುದೇ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದ ಅವರು, ಹಣಕಾಸಿನ ಕ್ರೋಡಿಕರಣ ಮಾಡಲು ಕಠಿಣ ಆಗಬಹುದು, ಅನಗತ್ಯ ಖರ್ಚು ಕಡಿಮೆ ಮಾಡಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.
ರಾಜ್ಯದಲ್ಲಿ ಆವರಿಸಿರುವ ಬರದ ಬಗ್ಗೆ ಮಾತನಾಡಿದ ಅವರು, ಪ್ರಕೃತಿ ನಮಗೆ ಹೇಳಿ ಕೇಳಿ ಕೈಕೊಡುವುದಿಲ್ಲ, 9 ಜಿಲ್ಲೆಯಲ್ಲಿ ಮಳೆ ಇಲ್ಲ. ಇದುವರೆಗೆ ನಮಗೆ ಮುಂಗಾರು ಕೊರತೆ ಇದೆ, ಬಹುತೇಕ ಕಡೆ 40 ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿಸಿದರು.
ನಮ್ಮಲ್ಲಿ ಹೈಡ್ರೋ ಪವರ್ ಉತ್ಪಾದನೆ ಕಡಿಮೆಯಾಗಿದೆ. ಹಾಗಾಗಿ ಸ್ವಲ್ಪ ದಿನ ತೊಂದರೆಯಾಬಹುದು, ಪ್ರಕೃತಿ ಯಿಂದ ಅದೆಲ್ಲ ಆಗುತ್ತದೆ. ನಾವೇನು ಮಾಡಿರುವುದಿಲ್ಲ ಎಂದು ರಾಜ್ಯದಲ್ಲಿಯ ಲೋಡ್ ಶೆಡ್ಡಿಂಗ್‌ಗೆ ಸಮರ್ಥನೆ ಮಾಡಿಕೊಂಡರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಕೆಲಸ ಮಾಡಬೇಕು. ಬರ ಬಂದಾಗ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಅದಕ್ಕಾಗಿ ಎನ್‌ಡಿಆರ್‌ಎಫ್ ನಿಧಿ ಇರುತ್ತದೆ. ಬರ ಪರಿಹಾರವಾಗಿ ವಿಶೇಷ ಅನುದಾನ ಕೊಡಬೇಕು. ಎಲ್ಲಿ, ಯಾವ ರಾಜ್ಯದಲ್ಲಿ ಬರ ಬಂದಿದೆ, ಜನರಿಗೆ ಯಾವ ಯಾವ ತೊಂದರೆಯಾಗಿದೆ ಎಂದು ಅಧ್ಯಯನ ನಡೆಸುವುದು ಕೇಂದ್ರದ ಕೆಲಸ ಎಂದು ತಿಳಿಸಿದರು. ಬರ ನಿರ್ವಹಣೆಯಲ್ಲಿ ಕೇಂದ್ರದ ಜವಾಬ್ದಾರಿ ಕೂಡ ಇದೆ. ಅದಕ್ಕಾಗಿ ನಾವು ಕೇಂದ್ರಕ್ಕೆ ವರದಿ ಕಳುಹಿಸುತ್ತೇವೆ. ಆನಂತರ ಅವರು ತೀರ್ಮಾನ ಮಾಡಿ ಸಮಿತಿ ಕಳುಹಿಸಿ ರಾಜ್ಯಕ್ಕೆ ಸಹಾಯ ಮಾಡಬೇಕೆಂದು ಪರಮೇಶ್ವರ್ ಕೇಂದ್ರಕ್ಕೆ ಒತ್ತಾಯಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.