ಬೆಂಗಳೂರು: ಕಾಂಗ್ರೆಸ್ ಈ ಬಾರಿ ಬೆಂಗಳೂರಿನಲ್ಲಿ 20 ಕ್ಷೇತ್ರ, ರಾಜ್ಯದಲ್ಲಿ 140 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂಬ ವರದಿ ಸಿಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನೀವು 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ನಿಮ್ಮ ಋಣ ತೀರಿಸಲು ಒಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ಅಧಿಕಾರದಲ್ಲಿದ್ದರೂ ಒಂದು ಜನಪರ ಯೋಜನೆ ಮಾಡಲಿಲ್ಲ. ಈ ಸರ್ಕಾರಕ್ಕೆ 40% ಸರ್ಕಾರ ಎಂದು ಹೆಸರು ಕೊಟ್ಟವರು ಯಾರು? ಬೊಮ್ಮಾಯಿ ಅವರು ಇದಕ್ಕೆ ಸಾಕ್ಷಿ ಕೇಳುತ್ತಿದ್ದರು. ಮಾಡಾಳು ವಿರೂಪಾಕ್ಷಪ್ಪ ಸಾಕ್ಷಿ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್, ಪ್ರತಿ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ಹಾಗೂ ಬಡ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ನೀಡುವ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಪ್ರಕಟಿಸಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ಅದೇ ರೀತಿ ತಿಗಳರ ಸಮುದಾಯದ ಅಭಿವೃದ್ಧಿ ನಿಗಮ ಖಚಿತ ಎಂದು ಹೇಳಲು ಬಯಸುತ್ತೇನೆ ಎಂದು ವಿವರಿಸಿದರು.
ಅವರದ್ದು ಕೇವಲ ಖಾಲಿ ಬುರುಡೆ ಮಾತುಗಳು , ದಳದವರು ಅಥವಾ ಬಿಜೆಪಿಯವರು ನೀವು ನೆನಪು ಮಾಡಿಕೊಳ್ಳುವಂತಹ ಯಾವುದಾದರೂ ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ? ಎಂದು ಆಕ್ರೋಶಿಸಿದರು.