ಬೆಂಗಳೂರು : ಸುದೀಪ್ ಹೆಸರಾಂತ ನಟ. ಸಮಾಜದ ಬಗ್ಗೆ ಕಾಳಜಿ ಇರುವಂತವರು. ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುವುದಾಗಿ ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಸುದೀಪ್ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು, ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರೋದಾದ್ರೆ ಖಂಡಿತಾ ಸ್ವಾಗತಿಸ್ತೇವೆ ಎಂದರು.
ಇನ್ನೂ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮೂಲಕ ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವು. ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಸುದೀಪ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆಗಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ನಾನೊಬ್ಬ ನಟ, ನನಗೆ ರಾಜಕೀಯ ಗೊತ್ತಿಲ್ಲ. ಹಾಗಾಗಿ ಆ ಕ್ಷೇತ್ರಕ್ಕೆ ಹೋಗಲಾರೆ ಎಂದು ಹಲವಾರು ಬಾರಿ ಸುದೀಪ್ ಹೇಳಿದ್ದರೂ, ಪದೇ ಪದೇ ರಾಜಕಾರಣದಲ್ಲಿ ಸುದೀಪ್ ಹೆಸರು ಕೇಳಿ ಬರುತ್ತಲೇ ಇದೆ. ಡಿ.ಕೆ. ಶಿವಕುಮಾರ್ ಭೇಟಿಯ ಹಿಂದೆ ಯಾವ ಉದ್ದೇಶ ಇರಬಹುದು ಎಂದು ಸುದೀಪ್ ಆಪ್ತರಲ್ಲಿ ವಿಚಾರಿಸಿದಾಗ, ಅದು ರಾಜಕೀಯ ಭೇಟಿ ಅಲ್ಲ ಎಂದು ಗೊತ್ತಾಗಿದೆ.
ಡಿಕೆಶಿ ಒಡೆತನದ ಮಾಲ್ ವೊಂದರಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಉದ್ಘಾಟನೆಗೆ ಸುದೀಪ್ ಅವರನ್ನು ಆಹ್ವಾನಿಸಲು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಡಿಕೆಶಿಗೆ ನಲಪಾಡ್ ಕೂಡ ಈ ಸಂದರ್ಭದಲ್ಲಿದ್ದರು.