ಕೋಲ್ಕತ್ತಾ : ಬೆಂಗಾಲಿ ಹೊಸ ವರ್ಷ ‘ಪೊಲಿಯಾ ಬೈಸಾಖ್’ ಅನ್ನು ‘ಬಾಂಗ್ಲಾ ದಿನ’ (Bengal Day) ವನ್ನಾಗಿ ಆಚರಿಸಲು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ನಮ್ಮ ನಿರ್ಣಯಕ್ಕೆ ರಾಜ್ಯಪಾಲರ ಅನುಮೋದನೆಯ ಅಗತ್ಯ ಇಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ
ಪಶ್ಚಿಮ ಬಂಗಾಳ ವಿಧಾನಸಭೆಯ ಒಟ್ಟು 294 ಸದಸ್ಯರ ಪೈಕಿ 167 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸುವುದರೊಂದಿಗೆ ನಿರ್ಣಯ ಅಂಗೀಕರಿಸಲಾಗಿದೆ. ಜೂನ್ 20 ಅನ್ನು ಬಾಂಗ್ಲಾ ದಿನವಾಗಿ ಆಚರಿಸಲು ಬಯಸುತ್ತಿರುವ ಬಿಜೆಪಿಯ 63 ಶಾಸಕರು ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, ಏಕೈಕ ಐಎಸ್ಎಫ್ ಶಾಸಕ ಕಲಾಪಕ್ಕೆ ಗೈರಾಗಿದ್ದರು.
ಪ್ರತಿ ವರ್ಷ ಏಪ್ರಿಲ್ 15ರಂದು ಪೊಯಿಲಾ ಬೈಸಾಖ್ ಅನ್ನು ‘ಬಂಗಾಳ ದಿನ (ಬಾಂಗ್ಲಾ ದಿವಸ್) ಎಂದು, ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ‘ಬಂಗ್ಲಾರ್ ಮತ್, ಬಾಂಗ್ಲಾರ್ ಜೋಲ್’ (ಬಂಗಾಳದ ಮಣ್ಣು, ಬಂಗಾಳದ ನೀರು) ಗೀತೆಯನ್ನು ರಾಜ್ಯ ಗೀತೆಯಾಗಿ ನಿಯಮ 169 ರ ಅಡಿ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಯಿತು.
ರವೀಂದ್ರನಾಥ್ ಟ್ಯಾಗೋರ್ ಅವರ ‘ಬಂಗ್ಲಾರ್ ಮತಿ ಬಂಗ್ಲಾರ್ ಜೋಲ್’ ಹಾಡನ್ನು ಬಂಗಾಳದ ಅಧಿಕೃತ ಗೀತೆಯಾಗಿ ಮಾಡುವ ಪ್ರಸ್ತಾಪವನ್ನು ನಾನು ಬೆಂಬಲಿಸುತ್ತೇನೆ. ಬಂಗಾಳದ ಜನರು ಜೂನ್ 20 ಅನ್ನು ಬಾಂಗ್ಲಾ ದಿನವಾಗಿ ಒಪ್ಪಿಕೊಳ್ಳುವುದಿಲ್ಲ. ಆ ದಿನ ರಾಜ್ಯ ವಿಭಜನೆಯನ್ನು ರಾಜ್ಯ ಸಂಸ್ಥಾಪನಾ ದಿನವೆಂದು ಗುರುತಿಸುತ್ತದೆ. ಅದು ಹಿಂಸಾಚಾರ ಮತ್ತು ರಕ್ತಪಾತಕ್ಕೆ ಸಮಾನಾದ ದಿನವಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ನಿರ್ಣಯದ ಮೇಲೆ ಮಾತನಾಡಿದರು.
ಕೇಂದ್ರ ಸರ್ಕಾರ ಜೂನ್ 20 ಅನ್ನು ಬಾಂಗ್ಲಾ ದಿನವನ್ನಾಗಿ ಆಯ್ಕೆ ಮಾಡಿದೆ. ನಾವು ಅದನ್ನು ಒಪ್ಪುವುದಿಲ್ಲ, ಬಾಂಗ್ಲಾ ದಿನದ ಬಗ್ಗೆ ನಾವು ಸದನದಲ್ಲಿ ನಿರ್ಣಯ ಮಾಡಿಸುತ್ತೇವೆ ಎಂದು ವಾರದ ಹಿಂದೆ ಮಮತಾ ಬ್ಯಾನರ್ಜಿ ಹೇಳಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.