ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ರಾಜ್ಯ ಸಂಪುಟ ಸಭೆ ನಡೆದಿದ್ದು, ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆಯಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಹೆಚ್.ಕೆ ಪಾಟೀಲ್ ಕೈಗೊಂಡ ನಿರ್ಣಯಗಳ ಕುರಿತು ಮಾಹಿತಿ ನೀಡಿದರು.
ಸ್ಥಳೀಯ ಸಂಸ್ಥೆಗಳ ಮೀಸಲಾತಿ ಸಂಬಂಧ ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿಯ ಶಿಫಾರಸ್ಸಿಗೆ ಅಂಗೀಕಾರ ನೀಡುವ ಸಂಬಂಧ ಚರ್ಚೆಯಗಬೇಕಿತ್ತು.ಆದರೆ, ಸಮಯದ ಕೊರತೆಯಿಂದ ಅದನ್ನು ಮುಂದೂಡಿಕೆ ಮಾಡಲಾಗಿದೆ ಎಂದರು. ಉಗ್ರಾಣಗಳ ನಿರ್ಮಾಣಕ್ಕೆ 13 ಕೋಟಿ ರೂಪಾಯಿ ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಕೆಪಿಎಸ್‌ಸಿಯ ಎರಡು ಖಾಲಿ ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
5ನೇ ಹಣಕಾಸು ಆಯೋಗ ರಚನೆಗೆ ಅನುಮೋದನೆ ನೀಡಲಾಗಿದೆ. ಈ ಆಯೋಗ ಅಧ್ಯಕ್ಷರು, ಇಬ್ಬರು ಸದಸ್ಯರನ್ನು ಹೊಂದಿರಲಿದೆ. ಮಂಡ್ಯ ವೈದ್ಯಕೀಯ ವಿಜ್ಞಾನ ಕೇಂದ್ರದಲ್ಲಿ ಕ್ಯಾನ್ಸರ್ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಲಾಗಿದೆ. ಇದಕ್ಕಾಗಿ 17 ಕೋಟಿ ರೂಪಾಯಿ ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಕಲಬುರಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 162 ಕೋಟಿ ರೂಪಾಯಿಯ ಯೋಜನೆಗೆ ಅನುಮೋದನೆ ನೀಡಲಾಗಿದೆ. ಮಂಡ್ಯ,ಕೊಪ್ಪಳ, ಕಲಬುರಗಿ ವೈದ್ಯಕೀಯ ಕಾಲೇಜುಗಳ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಜೆಒಸಿ ಉಪನ್ಯಾಸಕರ ಬಿಎಡ್ ಪದವಿ ಶಿಕ್ಷಣಕ್ಕೆ ಅನುಮತಿ ನೀಡಲಾಗಿದೆ. ಒಟ್ಟು162 ಜನರು ಉಪನ್ಯಾಸಕರಿದ್ದು, ಅವರಿಗೆ ಕೋರ್ಸ್ ವೇಳೆ ವೇತನ ಕೊಡಲು ನಿರ್ಧರಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ 2020-23 ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದರು.
ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಸೇವಾ ಶುಲ್ಕ 14.16 ರೂ. ನಿಗದಿ ಮಾಡಲಾಗಿದೆ. ಸ್ಮಾರ್ಟ್ ಕಾರ್ಡ್ ಮಾಡಿಸಲು ಆರು ತಿಂಗಳ ಗಡುವು ನೀಡಲಾಗಿದೆ. ಕೆಎಸ್‌ಆರ್‌ಟಿಸಿಗೆ 100 ಕೋಟಿ ರೂ. ವೆಚ್ಚದಲ್ಲಿ 250 ಹೊಸ ಬಸ್ ಖರೀದಿ, ವಾಯುವ್ಯ ಸಾರಿಗೆ ಸಂಸ್ಥೆಗೆ 150 ಕೋಟಿ ರೂ. ವೆಚ್ಚದಲ್ಲಿ 375 ಹೊಸ ಬಸ್ ಖರೀದಿ, ಬಿಎಂಟಿಸಿಗೆ 150 ಕೋಟಿ ರೂ. ವೆಚ್ಚದಲ್ಲಿ ಎಸಿ ಎಲೆಕ್ಟ್ರಿಕಲ್ ಬಸ್ ಖರೀದಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 100 ಕೋಟಿ ರೂ. ವೆಚ್ಚದಲ್ಲಿ 250 ಹೊಸ ಬಸ್ ಖರೀದಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಬರ ತಾಲೂಕುಗಳ ಘೋಷಣೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ಇನ್ನೂ ಈ ಬಗ್ಗೆ ಮಾಹಿತಿ ಬರಬೇಕು, ಬಂದ ನಂತರ ತೀರ್ಮಾನ ಮಾಡಲಾಗುವುದು ಎಂದರು. ಮುಂದಿನ ವಾರದ ಸಚಿವ ಸಂಪುಟದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.