ರಾಮನಗರ : ರಾಜ್ಯ ಸರ್ಕಾರ ನ್ಯಾಯಯುತವಾಗಿ ಕೆಲಸ ಮಾಡುತ್ತಿಲ್ಲ ಎಂದು ತಾವು ಕೊಟ್ಟ ಗ್ಯಾರಂಟಿ ನೀಡಲು ರಾಜ್ಯದ ಬೊಕ್ಕಸ ಬರಿದು ಮಾಡಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಮೆಡಿಕಲ್ ಕಾಲೇಜು ಸ್ಥಳಾಂತರ ಖಂಡಿಸಿ ಕರೆ ನೀಡಿದ್ದ ಬಂದ್ ನಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕ್ರಮದಿಂದ ಮುಂದೆ ರಾಜ್ಯ ಸಾಲದ ಸುಳಿಯಲ್ಲಿ ಸಿಲುಕುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ, ರಾಜ್ಯ ಸರ್ಕಾರ ಬಹಳ ಕಾಲ ಇರುವುದಿಲ್ಲ ಎಂಬುದು ಕಾಂಗ್ರೆಸ್ ಶಾಸಕರು ಹಾಗೂ ಸಚಿವರಿಗೆ ಗೊತ್ತಿದೆ, ಈ ಸರ್ಕಾರದಲ್ಲಿ ಯಾವುದು ಸರಿಯಾಗಿ ನಡೆಯುತ್ತಿಲ್ಲ, ವರ್ಗಾವಣೆ ದಂಧೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ತುಂಬಿ ತುಳುಕುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ‘ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ನನಗೆ ಗೊತ್ತಿಲ್ಲ’
ಒಂದು ಕಡೆ ಸಿಎಂ ಸಿದ್ದರಾಮಯ್ಯ ತಂಡ, ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್ ಬೆಟಾಲಿಯನ್ ರಾಜ್ಯವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ, ಸರ್ಕಾರದ ಭ್ರಷ್ಟಾಚಾರವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅನಿವಾರ್ಯ, ಬೆಂಗಳೂರು ಗ್ರಾಮಾಂತರ ಸೇರಿ ಕಾಂಗ್ರೆಸ್ ಮಣಿಸಲು ಮೈತ್ರಿ ಅಗತ್ಯ ಎಂಬ ಅಭಿಪ್ರಾಯ ಕಾರ್ಯಕರ್ತರು ಹಾಗೂ ಮುಖಂಡರಿಂದ ವ್ಯಕ್ತವಾಗಿತ್ತು,
ಮುಖಂಡರು ಕಾರ್ಯಕರ್ತರು ಭಾವನೆಯಂತೆ ದೇವೇಗೌಡರು ಹಾಗೂ ಅಮಿತ್ ಶಾ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ, ಅಲ್ಲದೇ ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಇದೆಲ್ಲ ಉತ್ತಮ ಬೆಳವಣಿಗೆ. ಮೈತ್ರಿ ಏರ್ಪಟ್ಟರೆ ಎನ್ ಡಿಎ ಭಾಗವಾಗಿ ಜೆಡಿಎಸ್ ಸೇರ್ಪಡೆಗೊಳ್ಳುತ್ತದೆ. ಕಾಂಗ್ರೆಸ್ ವಿರುದ್ಧ ಪ್ರಬಲವಾಗಿ ಸ್ಪರ್ಧೆ ಮಾಡುತ್ತೇವೆ.
ರಾಜ್ಯದಲ್ಲಿ ಕಳೆದ ಬಾರಿ 25 ಸ್ಥಾನ ದಕ್ಕಿತ್ತು. ಈ ಬಾರಿ ಕೂಡ 25 ಕ್ಕೂ ಹೆಚ್ಚು ಸ್ಥಾನ ಎನ್ ಡಿಎ ಮೈತ್ರಿಕೂಡ ಗೆಲ್ಲಲಿದೆ ಎಂದು ತಿಳಿಸಿದರು.
ಈ ಬೆಳವಣಿಗೆಯಿಂದ ಕಾಂಗ್ರೆಸ್ ನವರಿಗೆ ಭ್ರಮನಿರಸನವಾಗಿದೆ , ಡಿ.ಕೆ.ಶಿವಕುಮಾರ್ ಅವರ ಡ್ರಾಮಾಗೆ ಅಂಕಿತ ಹಾಕುತ್ತೇವೆ, ಭ್ರಷ್ಟರಿಂದ ಕರ್ನಾಟಕವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಇದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಅಚ್ಚರಿಯ ಘಟನೆಗಳು ನಡೆಯುತ್ತವೆ, ಕಾದು ನೋಡಿ.
ಬಿಜೆಪಿ-ಜೆಡಿಎಸ್ ಅಣ್ಣ -ತಮ್ಮ ಇದ್ದಂಗೆ
ಜೆಡಿಎಸ್ ಹಾಗೂ ಬಿಜೆಪಿ ಒಂದಾಗುತ್ತಿರುವುದು ಡಿಕೆಶಿ ಸಹೋದರರ ಮನಸ್ಸಿಗೆ ಘಾಸಿಯಾಗಿದೆ. ಅವರಲ್ಲಿ ಭಯ ಮೂಡಿದೆ. ಹಾಗಾಗಿ ನನ್ನ ಹಾಗೂ ಕುಮಾರಸ್ವಾಮಿ ಬಗ್ಗೆ ಅಸಂಬದ್ಧ ಪದ ಬಳಸುತ್ತಿದ್ದಾರೆ, ಸಿದ್ದರಾಮಯ್ಯ ಅವರಿಗೆ ಆಡಳಿತದ ಹಿಡಿತ ಇಲ್ಲ, ಜಾತಿ ಜಾತಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಮೊನ್ನೆ ಸಾಲು ಸಾಲು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ, ಡಿ.ಕೆ.ಶಿವಕುಮಾರ್ ಅವರಿಗೆ 5 ವರ್ಷ ಅಧಿಕಾರ ಸಿಕ್ಕರೆ ರಾಜ್ಯವನ್ನು ಹಾಳುಮಾಡುತ್ತಾರೆ. ಕಾಂಗ್ರೆಸ್ ನಾಯಕರಿಗೆ ನಮ್ಮ ಮೈತ್ರಿ ದೊಡ್ಡ ಶಾಕ್ ಕೊಟ್ಟಿದೆ , ಬಿಜೆಪಿ-ಜೆಡಿಎಸ್ ಅಣ್ಣ -ತಮ್ಮ ಇದ್ದಂಗೆ ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವಾಗಲಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.