ಬೆಂಗಳೂರು: ‘ಗೃಹ ಸಚಿವರೇ ಅಲ್ಪಸ್ವಲ್ಪ ಗೌರವ ಉಳಿಸಿಕೊಂಡಿದ್ದೀರ, ನೀವು ದಲಿತ ಸಮುದಾಯದ ಪ್ರತಿನಿಧಿ. ದಲಿತರ ಮೇಲೆ ದಬ್ಬಾಳಿಕೆ ಮಾಡುವ ಮಂತ್ರಿಗೆ (ಡಿ.ಸುಧಾಕರ್) ಏನು ಮಾಡ್ತೀರ ನೋಡಿ’ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ದಲಿತರ ಮೇಲೆ ದೌರ್ಜನ್ಯ ನಡೆಸಿರುವ ಮಂತ್ರಿಯನ್ನ ಕೂಡಲೇ ವಜಾ ಮಾಡಿ ಬಂಧಿಸಬೇಕು. ಕಾಂಗ್ರೆಸ್ ಪಕ್ಷದ್ದು ಕೇವಲ ಸ್ಲೋಗನ್ ಅಷ್ಟೆ. ದಲಿತರಿಗಷ್ಟೆ ಅಲ್ಲ, ಬಂಡವಾಳ ಹಾಕಿದವರಿಗೆ, ಕೆಲಸ ಮಾಡಿದವರಿಗೆ ಈ ಸರ್ಕಾರ ಹೆದರಿಸಿ ಬೆದರಿಸಿ ಲೂಟಿ ಮಾಡ್ತಾ ಇದೆ. ಇದನ್ನೆಲ್ಲಾ ಪ್ರಶ್ನೆ ಮಾಡಿದ್ರೆ ಅಸೂಯೆ ಅಂತೀರ, ಇಂಥ ಮಂತ್ರಿಗಳನ್ನ ಇಟ್ಟುಕೊಂಡು ಏನು ಸಂದೇಶ ಕೊಡ್ತೀರ’ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ದೇಶದ್ರೋಹ ಕಾನೂನು ಪ್ರಶ್ನಿಸಿದ್ದ ಅರ್ಜಿಗಳು ಸಂವಿಧಾನ ಪೀಠಕ್ಕೆ ಶಿಫಾರಸು
‘ಮಾಧ್ಯಮಗಳಲ್ಲಿ ಸುದ್ದಿ ಬಂದ ತಕ್ಷಣ ಸಚಿವ ಸುಧಾಕರ್ ಯಾಕೆ ಗೃಹ ಸಚಿವರ ಮನೆಗೆ ಹೋದ್ರು? ರಕ್ಷಣೆ ಪಡೆಯಲು ತಾನೇ ಹೋಗಿದ್ದು? ದೌರ್ಜನ್ಯ ನಡೆಸಿರುವ ವಿಡಿಯೋದಲ್ಲಿ ಅವರ ಧ್ವನಿ ಸ್ಪಷ್ಟವಾಗಿದೆ; ಮಾಧ್ಯಮದವರು ಮಿಮಿಕ್ರಿ ಮಾಡಿಲ್ಲ. ಗೃಹ ಸಚಿವರೇ ಅಲ್ಪಸ್ವಲ್ಪ ಗೌರವ ಉಳಿಸಿಕೊಂಡಿದ್ದೀರ, ನೀವೂ ಸಹ ದಲಿತ ಸಮುದಾಯದ ಪ್ರತಿನಿಧಿ. ದಲಿತರ ಮೇಲೆ ದಬ್ಬಾಳಿಕೆ ಮಾಡುವ ಮಂತ್ರಿಗೆ ಏನು ಮಾಡ್ತೀರ ನೋಡಿ’ ಎಂದರು.
ಸುಧಾಕರ್ ವಿರುದ್ಧ ವಾಗ್ಧಾಳಿ ಮುಂದುವರಿಸಿದ ಅವರು, ‘ನಿನ್ನೆ ರಾತ್ರಿಯಿಂದ ನೀವು ಯಾರಯಾರ ಬಳಿ ಹೋದ್ರಿ? ಸರ್ಕಾರ ಇದೆ ಅಂತ ಸ್ವೇಚ್ಚಾಚ್ಚಾರ ಮಾಡ್ತಾ ಇದ್ದೀರ. ಇದು ಸುಳ್ಳು ಕೇಸೋ ಏನೋ ಗೊತ್ತಿಲ್ಲ. ಆದರೆ, ಮನೆಗೆ ನುಗ್ಗಿ ದಬ್ಬಾಳಿಕೆ ಮಾಡಿರೋದು ಕಣ್ಣ ಮುಂದೆ ಇದೆ. ಪದ ಬಳಕೆ ಏನು ಮಾಡಿದ್ದಾರೆ ಗೊತ್ತಿದೆ. ನಾಚಿಕೆಯಾಗಬೇಕು ಇವರಿಗೆ, ಇವರೆಲ್ಲಾ ಆ ಸಂಸ್ಕೃತಿಯಿಂದ ಬಂದವರೆ’ ಎಂದು ವಾಗ್ದಾಳಿ ನಡೆಸಿದರು.
‘ನನ್ನ ಪಕ್ಷದಲ್ಲಿ ನಿಮ್ಮ ಹಾಗೆ ಮಾತಾಡಿದ್ರೆ ನಾನು ಒದ್ದು ಹೊರಗೆ ಹಾಕ್ತಿದ್ದೆ ಎಂದು ಯತ್ನಾಳ್ ಗೆ ಡಿಸಿಎಂ ಹೇಳಿದ್ರು. ಸುಧಾಕರ್ ಬಳಸಿರುವ ಭಾಷೆ ಬಹಳ ಚೆನ್ನಾಗಿದೆ. ದಲಿತ ಸಂಘಟನೆಗಳಿಗೂ ನಾನು ಈ ಬಗ್ಗೆ ಹೇಳ್ತೀನಿ. ಇದನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ಹಣದ ಮುಂದೆ ಈ ಸರ್ಕಾರಕ್ಕೆ ಏನೂ ಕಾಣಲ್ಲ’ ಎಂದು ಕಿಡಿಕಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.