ಬೆಂಗಳೂರು: ರಾಜ್ಯದಲ್ಲಿ ಕಿವುಡ, ಮಂಪರು ಕವಿದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ, ಜನವಿರೋಧಿ ನೀತಿ ಅನುಸರಿಸುತ್ತಿದೆ. ಬರಪೀಡಿತ ಪ್ರದೇಶ ಘೋಷಣೆ ಯಾವಾಗ; ನಿಮ್ಮ ಆದ್ಯತೆ ಏನು’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಹೆಚ್ಚು ಪರಿಹಾರ ಪಡೆಯಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸಚಿವರ ಹೇಳಿಕೆಯನ್ನು ಟೀಕಿಸಿದರು. ‘ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ಮದ ನೆತ್ತಿಗೇರಿದೆ. ಆ ಸಚಿವರು ರಾಜ್ಯದ ರೈತರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
ಇದನ್ನೂ ಓದಿ; ಎಂಎಲ್‌ಸಿ ಪ್ರದೀಪ್ ಯಾರಿಗೆ ಬಕೆಟ್ ಹಿಡಿದಿದ್ದ; ಶೆಟ್ಟರ್ ಸಹೋದರರ ವಿರುದ್ಧ ಈಶ್ವರಪ್ಪ ವಾಗ್ದಾಳಿ
‘ಭರವಸೆ ಈಡೇರಿಸಲಾಗದೆ ಚಾಲಾಕಿನಿಂದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಾರೆ. ಬರದ ವಿಚಾರದಲ್ಲಿ ಮಾನದಂಡ ಸಡಿಲಿಸಲು ಸಿಎಂ ಕೇಂದ್ರಕ್ಕೆ ಪತ್ರ ಬರೆಯುತ್ತಾರೆ; ಇದರ ಹಿಂದೆ ದುರುದ್ದೇಶ ಇದೆ. ಗ್ಯಾರಂಟಿ ಈಡೇರಿಸಲು ಸಾಧ್ಯ ಆಗುತ್ತಿಲ್ಲ. ಸರ್ಕಾರಿ ನೌಕರರಿಗೆ ವೇತನ ನೀಡುತ್ತಿಲ್ಲ. ಅಕ್ಕಿ ಬದಲು ಸರಿಯಾಗಿ ಹಣ ಕೊಡುತ್ತಿಲ್ಲ’ ಎಂದು ಆಕ್ಷೇಪಿಸಿದರು.
‘ಬರಪೀಡಿತ ತಾಲೂಕುಗಳನ್ನು ಘೋಷಿಸುವುದಾಗಿ ಕಂದಾಯ ಸಚಿವರು ಕೆಲದಿನಗಳ ಹಿಂದೆ ಹೇಳಿದ್ದಾರೆ. ಬಳಿಕ ಅದನ್ನು ಮುಂದೂಡಿದ್ದಾರೆ. ಸರ್ವೇ, ರಾಜ್ಯ ಪ್ರವಾಸದ ನೆಪ ಒಡ್ಡುತ್ತಿದ್ದಾರೆ. ಗ್ಯಾರಂಟಿ ಜಾತ್ರೆಗೆ ನಿಮಗೆ ಸಮಯ ಸಿಗುತ್ತದೆ. ಹಾಗಿದ್ದರೆ ನಿಮ್ಮ ಆದ್ಯತೆ ಏನು’ ಎಂದು ಪ್ರಶ್ನಿಸಿದರು.
‘ರಾಜ್ಯ ಸರ್ಕಾರಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವ ಕಳಕಳಿ, ಇಚ್ಛೆ ಇಲ್ಲ. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದಾರೆ. ಬರಪೀಡಿತ ಪ್ರದೇಶ ಘೋಷಣೆ ಯಾವಾಗ? ನೀವಿಲ್ಲಿ ತಡ ಮಾಡುತ್ತೀರಿ. ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಪ್ರಾಮಾಣಿಕ ಕಳಕಳಿ ಇಲ್ಲ. ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ದೂರಿದರು.
‘ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅತಿವೃಷ್ಟಿ ಆದಾಗ ಸಚಿವ ಸಂಪುಟ ರಚನೆ ಆಗಿರಲಿಲ್ಲ. ಆದರೂ ತಾವೇ ಸಮೀಕ್ಷೆ ನಡೆಸಿ ಮನೆ ಬಿದ್ದುದಕ್ಕೆ ಹೆಚ್ಚು ಹಣ ನೀಡಿದ್ದರು ಎಂದು ನೆನಪಿಸಿದ ಅವರು, ರಾಜ್ಯ ಸರ್ಕಾರ ತಕ್ಷಣ ಬರಗಾಲ ಪೀಡಿತ ತಾಲ್ಲೂಕುಗಳನ್ನು ಘೋಷಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ; ‘ಹುಚ್ಚ ಕೂಡಾ ಪ್ರಕಾಶ್ ರಾಜ್‌ಗಿಂತ ಉತ್ತಮವಾಗಿ ಮಾತಾಡ್ತಾನೆ’
‘ಡಿಸಿಎಂ ಶಿವಕುಮಾರ್, ಸಿಎಂ ಸಿದ್ದರಾಮಯ್ಯನವರು ಹಿಂದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದರು. ಈಗ ಕೇಂದ್ರದ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ. ಕಾವೇರಿ ಹೋರಾಟ ಮಾಡುತ್ತಿರುವ ರೈತರು, ಕನ್ನಡಪರ ಹೋರಾಟಗಾರರ ಧ್ವನಿ ಹತ್ತಿಕ್ಕುವ ಕೆಲಸ ನಡೆದಿದೆ. ನುಡಿದಂತೆ ನಡೆಯದ ಸರ್ಕಾರಕ್ಕೆ ರಾಜ್ಯದ ಜನರು, ರೈತರು ಶಾಪ ಹಾಕುತ್ತಿದ್ದಾರೆ’ ಎಂದರು.
‘ನಿರಂತರ ಲೋಡ್ ಶೆಡ್ಡಿಂಗ್ ಆಗುತ್ತಿದೆ. ನನ್ನ ಕ್ಷೇತ್ರ ಶಿಕಾರಿಪುರದಲ್ಲಿ 40 ಸಾವಿರ ಪಂಪ್ಸೆಟ್ ಇವೆ. ನೀರು ಮೇಲೆತ್ತಿ ಹಾಯಿಸಲು ಒಂದೆರಡು ತಾಸು ಕೂಡ ಕರೆಂಟ್ ಸಿಗುತ್ತಿಲ್ಲ. 200 ಯೂನಿಟ್ ಕರೆಂಟ್ ಉಚಿತ ಎನ್ನುವ ಸರಕಾರ, ರೈತರಿಗೆ ಪಂಪ್ಸೆಟ್‌ಗಳಿಗೆ ವಿದ್ಯುತ್ ಕೊಡುತ್ತಿಲ್ಲ. ರೈತರ ಬಗ್ಗೆ ಇವರಿಗೆ ಕನಿಕರ, ಅನುಕಂಪ ಇಲ್ಲ. ಇದು ಖಂಡನೀಯ’ ಎಂದರು.
‘ರಾಜ್ಯ ರೈತಸಂಘ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದೆ. ಸರ್ಕಾರ ನಿಜಾಂಶ ತಿಳಿಸುವ ಸಾಧ್ಯತೆ ಇಲ್ಲ ಎಂದು ಗಮನಿಸಿ ಈ ದಾವೆ ಹೂಡಲಾಗಿದೆ. ರೈತರಿಗೆ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಇಲ್ಲ’ ಎಂದರು.
‘ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇದೇ 8ರಂದು ಹೋರಾಟ ನಡೆಯಲಿದೆ. ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಡಾ. ಅಶ್ವತ್ಥನಾರಾಯಣ್, ಆರ್.ಅಶೋಕ್ ಮತ್ತಿತರ ಮುಖಂಡರು ಭಾಗವಹಿಸುತ್ತಾರೆ. ಇದು ನುಡಿದಂತೆ ನಡೆಯದೆ ಎಡವುತ್ತಿರುವ ಸರ್ಕಾರ’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.