ಚೆನ್ನೈ: ಉತ್ತರ ಪ್ರದೇಶ ಮುಖ್ಯಮಂತ್ರಿ 51 ವರ್ಷದ ಯೋಗಿ ಆದಿತ್ಯನಾಥ್ ಕಾಲಿಗೆ ಎರಗಿ ನಮಸ್ಕರಿಸಿದ್ದ 72 ವರ್ಷದ ರಜನಿಕಾಂತ್ ನಡೆಗೆ ನೆಟ್ಟಿಗರು ಹಾಗೂ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸ್ಪಷ್ಟನೆ ನೀಡಿರುವ ಅವರು, ‘ಸನ್ಯಾಸಿ’ ಅಥವಾ ‘ಯೋಗಿ’ಯ ಪಾದಗಳಿಗೆ ಆ ವ್ಯಕ್ತಿಯ ವಯಸ್ಸನ್ನು ಲೆಕ್ಕಿಸದೆ ಬೀಳುವುದು ನನ್ನ ಅಭ್ಯಾಸ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಸೋಮವಾರ ತಿರುಗೇಟು ಕೊಟ್ಟಿದ್ದಾರೆ.
ತಮ್ಮ ಜೈಲರ್ ಸಿನಿಮಾ ಪ್ರಚಾರದ ಭಾಗವಾಗಿ ಇತ್ತೀಚೆಗೆ ಲಕ್ನೋಗೆ ಭೇಟಿ ನೀಡಿದ್ದ ರಜನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದರು. ಯೋಗಿ ಕಾಲಿಗೆ ರಜನಿ ನಮಸ್ಕರಿಸಿದ್ದ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿ ಪರ-ವಿರೋಧ ಚರ್ಚೆಗಳು ನಡೆದಿತ್ತು. ಈ ಬಗ್ಗೆ ಚೆನೈನಲ್ಲಿ ಸ್ಪಷ್ಟನೆ ನೀಡಿರುವ ಅವರು, ಸನ್ಯಾಸಿಯಾಗಲಿ, ಯೋಗಿಯಾಗಲಿ ನನಗಿಂತ ಚಿಕ್ಕವರಾದರೂ ಅವರ ಕಾಲಿಗೆ ಬೀಳುವುದು ನನ್ನ ಅಭ್ಯಾಸ, ಅದನ್ನೇ ಮಾಡಿದ್ದೇನೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಇದನ್ನೂ ಓದಿ; ಸಿಎಂ ಯೋಗಿ ಆದಿತ್ಯಾನಾಥ್ ಕಾಲಿಗೆ ಬಿದ್ದ ರಜಿನಿಕಾಂತ್!
ಕಳೆದವಾರ ಲಕ್ನೋ ಪ್ರವಾಸ ಕೈಗೊಂಡಿದ್ದ ಸೂಪರ್ ಸ್ಟಾರ್ ರಜಿನಿಕಾಂತ್ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರನ್ನು ಭೇಟಿಯಾಗಿ ಕಾಲು ಮುಟ್ಟಿ ನಮಸ್ಕರಿಸಿದ್ದರು. ಇದಕ್ಕೂ ಮೊದಲು ರಜಿನಿಕಾಂತ್ ಲಕ್ನೋದಲ್ಲಿ ಜೈಲರ್ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿದ್ದರು, ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸೇರಿ ಹಲವರು ಸಿನಿಮಾ ವೀಕ್ಷಿಸಿದರು.
ಲಕ್ನೋ ಆಗಮನಕ್ಕೂ ಮುನ್ನ ಮಾತನಾಡಿದ್ದ ರಜಿನಿಕಾಂತ್, ನಾನು ಸಿಎಂ ಯೋಗಿ ಆದಿತ್ಯಾನಾಥ್ ಜೊತೆ ಸಿನಿಮಾ ವೀಕ್ಷಿಸಲು ತೆರಳುತ್ತಿದ್ದೇನೆ. ಸಿನಿಮಾ ಹಿಟ್ ಆಗಿರುವುದು ದೇವರ ಆರ್ಶೀವಾದ ಎಂದಿದ್ದರು. ಇನ್ನು ಜೈಲರ್ ಸಿನಿಮಾ ಬಿಡುಗಡೆಗೂ ಒಂದು ದಿನ ಮೊದಲು ರಜಿನಿಕಾಂತ್ ಹಿಮಾಲಯಕ್ಕೆ ತೆರಳಿದ್ದರು. ಕೋವಿಡ್ ನಂತರ ಇದೇ ಮೊದಲು ಅವರು ಹಿಮಾಲಯ ಪ್ರವಾಸ ಮಾಡಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.