ಚಿಕ್ಕಮಗಳೂರು : ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಸಿ.ಟಿ ರವಿ, ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಿದ್ದ ಎಂದು ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಾದರೂ ಪಕ್ಷ ತೊರೆದು ಬಂದರೆ ಹಿಂದಿನ ಬೆಂಚ್ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ಸಿಗರು ಗೌರವದಿಂದ ಕರೆಯುತ್ತಿಲ್ಲ, ಗೌರವ ಇಲ್ಲದ ಜಾಗಕ್ಕೆ ಯಾಕೆ ಹೋಗ್ಬೇಕು?. ಯಾರಾದರು ಪಕ್ಷ ಬಿಟ್ಟು ಹೋದರೆ ನಾವು ಯಾವ ಪರಿಸ್ಥಿತಿಯನ್ನು ಬೇಕಾದರೂ ಎದುರಿಸುತ್ತೇವೆ ಎಂದರು.
ನನ್ನನ್ನು ಬಿಜೆಪಿ ಪಕ್ಷದಿಂದ ಕಳಿಸಿಕೊಡಲು ನೋಡ್ತಿದ್ದಾರೆ ಎಂದು ಎಸ್.ಟಿ ಸೋಮಶೇಖರ್ ಹೇಳಿದ್ದಾರೆ. ನಾನು ಅದೇ ದಾಟಿಯಲ್ಲಿ ಉತ್ತರಿಸಿದ್ರೆ ಕಳಿಸಿಕೊಡಲು ನೋಡ್ತಿದ್ದೇವೆ ಅನ್ನಿಸಿಬಿಡುತ್ತದೆ. ನಾವು ಯಾರನ್ನು ಕಳಿಸುವ ಪ್ರಯತ್ನ ಮಾಡಲ್ಲ, ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಉಳಿಯೋದು-ಹೋಗೋದು ಅವರಿಗೆ ಬಿಟ್ಟದ್ದು ಎಂದು ಸಿ.ಟಿ ರವಿ ಹೇಳಿದರು. ರೇಣುಕಾಚಾರ್ಯ, ಶಿವರಾಮ್ ಹೆಬ್ಬಾರ್ ಸಿಎಂ, ಡಿಸಿಎಂ ಅನ್ನು ಯಾಕೆ ಭೇಟಿ ಮಾಡಿದ್ದಾರೋ ಗೊತ್ತಿಲ್ಲ ಎಂದರು.
ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸೇರ್ಪಡೆಯಾಗಿರುವ 17 ಶಾಸಕರ ಪೈಕಿ ಕೆಲವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ಎಸ್.ಟಿ ಸೋಮಶೇಖರ್ ಸೇರಿದಂತೆ ಕೆಲವರು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಎಂ.ಪಿ ರೇಣುಕಾಚಾರ್ಯ, ಶಿವರಾಮ್ ಹೆಬ್ಬಾರ್ ಸೇರಿದಂತೆ ಕೆಲವರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.