ವಿಜಯಪುರ: ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ, 2028ರ ರಾಜ್ಯ ವಿಧಾನಸಭೆಯ ವೇಳೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.
ಜೆಡಿಎಸ್ ಪಂಚರತ್ನ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ನಾನು ನಿನ್ನ ಮುಂದೆ ಬಂದು ಮತ ಕೇಳುವುದಿಲ್ಲ , ಸಿಂದಗಿಯಲ್ಲಿ ಜನರು ದೇವೆಗೌಡರು ನೀಡಿದ್ದ ನೀರಾವರಿ ಯೋಜನೆ ನೆನಪಿಟ್ಟುಕೊಂಡಿದ್ದಾರೆ. ನಮ್ಮ ತಪ್ಪಿನಿಂದ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದೇವೆ. ಅಂದು ದೇವೆಗೌಡರನ್ನ ಬಹಳ ಪ್ರೀತಿಯಿಂದ ಸ್ವಾಗತಿಸಿದ್ದೀರಿ. ದೇವೆಗೌಡರ ಮೇಲೆ ನೀವಿಟ್ಟ ಪ್ರೀತಿ ಮರೆತಿಲ್ಲ ಎಂದು ಹೇಳಿದರು.
ಒಂದು ವೇಳೆ ಐದು ವರ್ಷಗಳಲ್ಲಿ ನಾವು ಹೇಳಿದ ಕೆಲಸ ಮಾಡದಿದ್ದರೆ 2028ರ ಒಳಗಾಗಿ ನಮ್ಮ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದರು. ಬಿಜೆಪಿ ಮತ್ತು ಕಾಂಗ್ರೆಸ್ ರೈತರಿಗೆ ಮಾರಕವಾಗಿವೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಜನರ ಪ್ರೀತಿ ವಿಶ್ವಾಸದೊಂದಿಗೆ ರಾಜ್ಯದ ಜನತೆಯ ನೋವಿಗೆ ಸ್ಪಂದಿಸುವ ಪಕ್ಷವಾಗಿದೆ ಎಂದು ತಿಳಿಸಿದರು.
ಯತ್ನಾಳ್-ನಿರಾಣಿ ಕಿತ್ತಾಟ ಮಾಡುತ್ತಿದ್ದಾರೆ. ಒಂದೆ ಪಕ್ಷದಲ್ಲಿದ್ದು ಕೆಸರು ಎರಚುತ್ತಿದ್ದಾರೆ. ಅವರ ಬಳಕೆ ಮಾಡುವ ಭಾಷೆ ನೋಡಿದ್ದೀರಾ? ಬಿಜೆಪಿ ಜನರ ತೆರಿಗೆ ಹಣ ಲೂಟಿ ಮಾಡ್ತಿದ್ದಾರೆ. ಕಾಂಗ್ರೆಸ್-ಬಿಜೆಪಿ ರೈತರಿಗಾಗಿ ಕಾರ್ಯಕ್ರಮ ಕೊಡಲಿಲ್ಲ ಎಂದು ಆರೋಪ ಮಾಡಿದರು.