ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲೇ ದೊಡ್ಡ ತಾಲ್ಲೂಕಾದ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಎರೆಡು ಬಾರಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಆಯ್ಕೆಯಾಗಿ 1989 ರಿಂದ 1999 ರವರೆಗೆ ಸುಧೀರ್ಘ ಹತ್ತು ವರ್ಷಗಳಕಾಲ ಆಡಳಿತ ನೀಡಿ, ಬಿಡಿಎ ಅಧ್ಯಕ್ಷರಾಗಿ, ನಂತರ ಜೆಡಿಎಸ್ ಪಕ್ಷದ ಮೂಲಕ ಒಮ್ಮೆ ಮಂಡ್ಯ ಜಿಲ್ಲೆಯ ಸಂಸದರಾಗಿ ಆಯ್ಕೆಯಾಗಿದ್ದ ಎಲ್.ಅರ್.ಶಿವರಾಮೇಗೌಡರು ಕೊನೆಗೆ ಜೆಡಿಎಸ್‌ನಿಂದ ಉಚ್ಛಾಟನೆಗೊಂಡು ಹೊರಬಂದು ಜೆಡಿಎಸ್ ವಿರುದ್ಧ ಸ್ವಾಭಿಮಾನ ಪರ್ವ ಅಭಿಯಾನ ಸಾರಿದ್ದರು. 2023ರ ಚುನಾವಣೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಜ್ಜಾಗುತ್ತಿರುವ ಎಲ್.ಅರ್.ಶಿವರಾಮೇಗೌಡರು ನಾಳೆ ಬೆಂಗಳೂರಿನಲ್ಲಿ ನಾಗಮಂಗಲ ಮೂಲದ ಬೆಂಗಳೂರು ನಿವಾಸಿಗಳ ಸ್ವಾಭಿಮಾನ ಸಭೆ ಆಯೋಜನೆ ಮಾಡಿದ್ದಾರೆ.
ಇದೀಗ ಈ ಸಭೆಯೇ ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ ಇಂದಿನ ಅವರ ಸಾಮಾಜಿಕ ಜಾಲತಾಣದಲ್ಲಿನ ಕೆಲವು ಪೋಸ್ಟ್‌ಗಳು, ನಾಳೆಯ ಸ್ವಾಭಿಮಾನ ಸಮಾವೇಶಕ್ಕೆ ಎಲ್.ಅರ್.ಶಿವರಾಮೇಗೌಡರು ಬಿಜೆಪಿಯ ಕೆಲವು ಸಚಿವರನ್ನ ಹಾಗೂ ಶಾಸಕರನ್ನ ಆಹ್ವಾನಿಸಿರುವುದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾಳೆ ನೆಡೆಯುತ್ತಿರುವ ನಾಗಮಂಗಲ ಮೂಲದ ಬೆಂಗಳೂರು ನಿವಾಸಿಗಳ ಸ್ವಾಭಿಮಾನ ಸಭೆಯಲ್ಲಿ, ಎಲ್.ಅರ್.ಶಿವರಾಮೇಗೌಡರು ಕಾರ್ಯಕರ್ತರ ಹಾಗೂ ನಾಗಮಂಗಲ ನಿವಾಸಿಗಳ ಸಮ್ಮತಿ ಪಡೆದು ಬಿಜೆಪಿ ಸೇರ್ತಾರೆ ಎನ್ನುವ ಸುದ್ದಿ ಈಗ ಎಲ್ಲೆಡೆ ಹರಿದಾಡ್ತಿದೆ. ಈ ಮೂಲಕ ಎಲ್ಲೋ ಒಂದು ಕಡೆ ನಾಗಮಂಗಲದ ಸ್ವಾಭಿಮಾನಿ ಪರ್ವ ಬಿಜೆಪಿಯತ್ತ ವಾಲಿದಂತೆ ಕಾಣುತ್ತಿದೆ. ಸದ್ಯ ಶಿವರಾಮೇಗೌಡರ ಈ ನಡೆ ಹಾಗೂ ನಾಳೆ ನೆಡೆಯಲಿರುವ ಸ್ವಾಭಿಮಾನಿ ಸಭೆ ರಾಜಕೀಯ ರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಒಟ್ಟಾರೆ ನಾಳೆ ನೆಡೆಯಲಿರುವ ಸಭೆ ಎಲ್ಲಾ ಚರ್ಚೆಗಳಿಗೂ ಬಹಿರಂಗ ಉತ್ತರ ನೀಡಲಿದೆ. ಒಂದು ವೇಳೆ ಬಿಜೆಪಿಯಿಂದ ಶಿವರಾಮೇಗೌಡ್ರು ನಾಗಮಂಗಲ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತವಾದ್ರೆ ಈ ಬಾರಿ ನಾಗಮಂಗಲ ವಿಧಾನಸಭಾ ಕ್ಷೇತ್ರ ನೇರವಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳಿಂದ ಕೂಡಿದ ತ್ರಿಕೋನ ಸ್ಪರ್ಧೆಗೆ ವೇದಿಕೆಯಾಗಲಿದೆ. ಇದಕ್ಕೂ ಮೊದಲು ಬಿಜೆಪಿಯಿಂದ ಫೈಟರ್ ರವಿ ಹೆಸರು ಕೇಳಿಬಂದಿತ್ತು ಮೊನ್ನೆ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಭೇಟಿನ ನೀಡಿದ್ದ ವೇಳೆ ಫೈಟರ್ ರವಿಗೆ ಕೈ ಮುಗಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿಗೆ ಮುಜುಗರ ಉಂಟುಮಾಡಿತ್ತು. ಇದೀಗ ಬಿಜೆಪಿ ಶಿವರಾಮೇಗೌಡರಿಗೆ ಬಲೆ ಬೀಸಿದ್ದು, ಒಂದು ವೇಳೆ ಶಿವರಾಮೇಗೌಡ್ರು ಬಿಜೆಪಿ ಸೇರಿದ್ರೆ. ನಾಗಮಂಗಲ ಜಿದ್ದಾಜಿದ್ದಿನ ಕಣವಾಗುವುದಂತೂ ಖಚಿತ.