Tuesday, November 28, 2023
spot_img
- Advertisement -spot_img

ಕರ್ನಾಟಕದಲ್ಲಿ ವರ್ಕ್‌ ಆಗುತ್ತಾ ಗುಜರಾತ್‌ ಮಾದರಿ, ರಾಜ್ಯದಲ್ಲಿ ಬಿಜೆಪಿಗೆ ಪ್ಲಸ್‌-ಮೈನಸ್‌ ಏನೇನು!?

2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಹತ್ತಿರವಾಗ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲ್ಲಾ ರಾಜಕೀಯ ಪಕ್ಷಗಳೂ ಅಭ್ಯರ್ಥಿ ಆಯ್ಕೆ, ತಂತ್ರ-ಪ್ರತಿತಂತ್ರ ಹೆಣೆಯುವುದರಲ್ಲಿ ಬ್ಯುಸಿಯಾಗಿವೆ. ಈ ನಡುವೆ ಕಾಂಗ್ರೆಸ್‌-ಬಿಜೆಪಿಗೆ ಠಕ್ಕರ್‌ ನೀಡಲು ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್‌, ಕೆಆರ್‌ಎಸ್‌, ಪ್ರಜಾಕೀಯ ಸಹ ಅಖಾಡಕ್ಕೆ ಸಿದ್ಧತೆ ನಡೆಸುತ್ತಿದೆ. ಜೊತೆಗೆ ಎಎಪಿ ಸಹ ಪೃಥ್ವಿ ರೆಡ್ಡಿ ಹಾಗೂ ಭಾಸ್ಕರ್‌ ರಾವ್‌ ನೇತೃತ್ವದಲ್ಲಿ ತೆರೆಮರೆಯ ಕಸರತ್ತು ಆರಂಭಿಸಿದೆ. ಒಟ್ಟಾರೆ ಕರ್ನಾಟಕದಲ್ಲಿ 2023ರ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಇನ್ನೂ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಾಖಲೆಯ ಜಯ ಸಾಧಿಸಿದೆ. ಒಟ್ಟಾರೆ 182 ಕ್ಷೇತ್ರಗಳ ಪೈಕಿ ಬಿಜೆಪಿ- ಬರೋಬ್ಬರಿ 152 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ಇನ್ನುಳಿದಂತೆ 17 ಕ್ಷೇತ್ರದಲ್ಲಿ ಕಾಂಗ್ರೆಸ್‌, 5ರಲ್ಲಿ ಎಎಪಿ ಮತ್ತು 4 ಕ್ಷೇತ್ರಗಳಲ್ಲಿ ಇತರೆ ಪಕ್ಷ ಗೆಲುವು ಸಾಧಿಸಿವೆ. ಸದ್ಯ ಬಿಜೆಪಿ ಪಕ್ಷ ತನ್ನ ಗೆಲುವಿನ ನಾಗಾಲೋಟವನ್ನ ಕರ್ನಾಟಕದಲ್ಲೂ ಮುಂದುವರೆಸುವ ಹುಮ್ಮಸಿನಲ್ಲಿದೆ. ಸದ್ಯ ಗುಜರಾತ್‌ ಫಲಿತಾಂಶ ಕರ್ನಾಟಕದ ಚುನಾವಣೆಯ ಮೇಲೂ ಪ್ರಭಾವ ಬೀರುತ್ತಾ ಅನ್ನೋ ಚರ್ಚೆ ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ.

ರಾಜ್ಯ ಬಿಜೆಪಿಯಲ್ಲಿ ಹಿರಿತಲೆಗಳಿಗೆ ಶುರುವಾಯ್ತು ನಡುಕ..!
ಸದ್ಯದ ಕರ್ನಾಟಕದ ಪರಿಸ್ಥಿತಿಯಂತೆ ಗುಜರಾತ್‌ನಲ್ಲೂ ಈ ಬಾರಿ ಆಡಳಿತ ವಿರೋಧಿ ಅಲೆಯೇ ಎದ್ದಿತ್ತು. ಆ ಆಡಳಿತ ವಿರೋಧಿ ಅಲೆಯನ್ನ ಮೆಟ್ಟಿ ನಿಲ್ಲಲು ರಾಷ್ಟ್ರೀಯ ಬಿಜೆಪಿ ನಾಯಕರು ಗುಜರಾತಿನಲ್ಲಿ ಹಲವು ಬದಲಾವಣೆಗಳನ್ನೇ ಮಾಡಿದ್ದರು. ಸದ್ಯ ಆ ಬದಲಾವಣೆಗಳೇ ಬಿಜೆಪಿಯ ಪ್ರಚಂಡ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಗುಜರಾತ್​ನಲ್ಲಿ ಪ್ರಯೋಗಿಸಿದ ಅಸ್ತ್ರಗಳನ್ನೇ ಕರ್ನಾಟಕದಲ್ಲೂ ಪ್ರಯೋಗಿಸುವ ಸಾಧ್ಯತೆಗಳಿವೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಈ ಪ್ರಯೋಗಕ್ಕೆ ಮುಂದಾದ್ರೆ ರಾಜ್ಯದಲ್ಲಿ ಒಂದಿಷ್ಟು ಹಿರಿ ತಲೆಗಳಿಗೆ ಟಿಕೆಟ್ ತಪ್ಪುವ ಸಾಧ್ಯತೆಯೂ ಇದೆ. ಹೌದು.. ಗುಜರಾತ್ ಚುನಾವಣೆಯಲ್ಲಿ ಈ ಬಾರಿ ಹಿರಿ ತಲೆಗಳಿಗೆ ಕೋಕ್‌ ನೀಡಿ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಆಡಳಿತ ವಿರೋಧಿ ಅಲೆ ಮೆಟ್ಟಿ ನಿಲ್ಲಲು ಮಾಜಿ ಸಿಎಂ ವಿಜಯ್ ರೂಪಾನಿ ಸೇರಿದಂತೆ ಅನೇಕ ನಾಯಕರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಸದ್ಯದ ಮೇಲ್ನೋಟದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿರೋದು ಸಕ್ಸಸ್ ಆದಂತೆ ಕಾಣಿಸುತ್ತಿದೆ. ಇದೇ ಸ್ಟ್ರ್ಯಾಟರ್ಜಿಯನ್ನ ಕರ್ನಾಟಕಲ್ಲೂ ಪ್ರಯೋಗಿಸಿದ್ರೆ ಇಲ್ಲೂ ಅನೇಕ ಹಿರಿತಲೆಗಳಿಗೆ ಟಿಕೆಟ್‌ ಕೈತಪ್ಪೋದು ನೋ ಡೌಟ್‌… ಈ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಬಿಜೆಪಿ ಸೀನಿಯರ್‌ ಲೀಡರ್‌ ಗಳಿಗೆ ಈಗಾಗಲೇ ನಡುಕ ಶುರುವಾಗಿದೆ.

ಕರ್ನಾಟಕದಲ್ಲಿ ವರ್ಕ್‌ ಆಗುತ್ತಾ ಗುಜರಾತ್‌ ಮಾದರಿಯ ರಣತಂತ್ರ..!?
ಸದ್ಯದ ಕರ್ನಾಟಕ ಪರಿಸ್ಥಿತಿಯಲ್ಲಿ ಆಡಳಿತ ವಿರೋಧಿ ಅಲೆ ದೊಡ್ಡಮಟ್ಟದಲ್ಲೇ ಇದೆ. 40% ಕಮಿಷನ್‌ ಆರೋಪ, ವೋಟರ್‌ ಐಡಿ ಸ್ಕ್ಯಾಮ್‌, ರೌಡಿ ರಾಜಕಾರಣ, ಬೆಲೆ ಏರಿಕೆ ಸೇರಿ ಹಲವು ಕಾರಣಗಳಿಂದ ಬಿಜೆಪಿ ವರ್ಚಸ್ಸು ಕಳೆದುಕೊಂಡಿದೆ. ಸದ್ಯ ಇದನ್ನೇ ವಿರೋಧ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಇನ್ನು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸಿಎಂ ಸ್ಥಾನ ಬದಲಾವಣೆಯ ನಂತರವೂ ಆಡಳಿತದಲ್ಲಿ ಹೇಳಿಕೊಳ್ಳುವಂತ ದೊಡ್ಡ ಮಟ್ಟದ ಸುಧಾರಣೆ ಕಂಡುಬಂದಿಲ್ಲ. ಮೇಲಾಗಿ ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗರ ನಡುವಿನ ಭಿನ್ನಾಭಿಪ್ರಾಯವೂ ಹಿನ್ನಡೆಯಾಗಿ ಮಾರ್ಪಾಡಾಗಬಹುದು. ಕಾಂಗ್ರೆಸ್ ಹಾಗೂ ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡ 17 ಮಂದಿ ಶಾಸಕರ ಪೈಕಿ ಪ್ರಮುಖರಿಗೆ ಸಂಪುಟದಲ್ಲಿ ಉತ್ತಮ ಖಾತೆ ನೀಡಲಾಗಿದೆ. ಇದು ಮೂಲ ಬಿಜೆಪಿಗರ ಅಸಮಾಧಾನಕ್ಕೆ ಕಾರಣವೂ ಆಗಿದೆ. ಅಲ್ಲದೇ ನಾಯಕತ್ವದ ಕೊರತೆಯೂ ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನಡೆಯಾಗುತ್ತಿದೆ. ಬಿಎಸ್‌ವೈ ಹೊರತಾಗಿ ರಾಜ್ಯದಲ್ಲಿ ಬಿಜೆಪಿಗೆ ಹೇಳಿಕೊಳ್ಳುವ ಮಾಸ್‌ ಲೀಡರ್‌ ಯಾರೂ ಇಲ್ಲ. ಗುಜರಾತ್‌ ಮಾದರಿ ರಣತಂತ್ರದ ಹೊರತಾಗಿಯೂ ಈ ಎಲ್ಲಾ ಕಾರಣಗಳೂ ಬಿಜೆಪಿಗೆ 2023ರ ಚುನಾವಣೆಯಲ್ಲಿ ಮುಳುವಾಗಬಹುದು.

ಕರ್ನಾಟಕದಲ್ಲಿ ಹೆಚ್ಚಾಯ್ತು ‘ಕೈ-ತೆನೆ’ ವರ್ಚಸ್ಸು..!
ಇತ್ತೀಚಿನ ಬೆಳವಣಿಗೆಗಳನ್ನ ಗಮನಿಸಿದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್‌ ನಾಯಕರು ಹಾಗೂ ಜೆಡಿಎಸ್‌ ಲೀಡರ್‌ ಹೆಚ್‌.ಡಿ.ಕುಮಾರಸ್ವಾಮಿಯವರ ವರ್ಚಸ್ಸು ಹೆಚ್ಚಾಗುತ್ತಿದೆ. ಬಿಜೆಪಿಯ ಆಡಳಿತದಲ್ಲಿ ನಡೆಯುತ್ತಿರು 40% ಕಮಿಷನ್‌ ಆರೋಪ, ವೋಟರ್‌ ಐಡಿ ಸ್ಕ್ಯಾಮ್‌, ರೌಡಿ ರಾಜಕಾರಣ, ಬೆಲೆ ಏರಿಕೆ ಸೇರಿ ಹಲವು ಕಾರಣಗಳನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಬೆಂಕಿ ಉಗುಳುತ್ತಿವೆ. ಅಲ್ಲದೇ ಸರ್ಕಾರದ ವಿರುದ್ಧ ವಿನೂತನ ಅಭಿಯಾನಗಳನ್ನೇ ನಡೆಸುತ್ತಿವೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ, ಸಿದ್ದರಾಮೋತ್ಸವ, ಭಾರತ್‌ ಜೋಡೋದಂತಹ ಪಾದಯಾತ್ರೆಗಳು ಬಿಜೆಪಿಗೆ ಭಾರೀ ಹೊಡೆತವನ್ನೇ ನೀಡಿವೆ. ಇನ್ನು ಬಿಜೆಪಿ ಸಹ ಇದಕ್ಕೆ ಪರ್ಯಾಯವಾಗಿ ಹಲವು ಸಮಾವೇಶಗಳನ್ನ ನಡೆಸಿದ್ದು, ಕಾಂಗ್ರೆಸ್‌ಗೆ ಸಿಕ್ಕಷ್ಟು ಜನ ಬೆಂಬಲ, ಯಶಸ್ಸು ಬಿಜೆಪಿಗೆ ಸಿಕ್ಕಿಲ್ಲ. ಈ ನಡುವೆ ಜೆಡಿಎಸ್‌ನ ಹೆಚ್‌.ಡಿ.ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ಯಾತ್ರೆಗೂ ಭಾರೀ ಜನಬೆಂಬಲ ದೊರೆಯುತ್ತಿದೆ. ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿರುವ ಸಿಎಂ ಹಿಬ್ರಾಹಿಂ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ದಳಪತಿಗಳು ಅಲ್ಪಸಂಖ್ಯಾತರ ವೋಟ್‌ ಸೆಳೆಯುವ ಯತ್ನ ಮಾಡ್ತಿದ್ದಾರೆ. ಇನ್ನೊಂದೆ ಜೆಡಿಎಸ್‌ ಯೂತ್‌ ಲೀಡರ್‌ ನಿಖಿಲ್‌ ಕುಮಾರಸ್ವಾಮಿ ಸಹ ಯುವಕರ ಮತ ಬೇಟೆಗೆ ಪಂಚರತ್ನ ಯಾತ್ರೆ ನಂತರ ರಾಜ್ಯ ಪ್ರವಾಸದ ಪ್ಲಾನ್‌ ಮಾಡಿದ್ದಾರೆ. ಇದು ಬಿಜೆಪಿ ನಾಯಕರಿಗೆ ದೊಡ್ಡ ಹೊಡೆತವನ್ನೇ ನೀಡುತ್ತಿದೆ. ಒಟ್ಟಾರೆ ರಾಜ್ಯದಲ್ಲೂ ಗುಜರಾತ್‌ ಮಾದರಿಯನ್ನೇ ಪ್ರಯೋಗಿಸಲು ಹೊರಟಿರುವ ಬಿಜೆಪಿಗೆ ಎಷ್ಟರಮಟ್ಟಿಗೆ ಕರ್ನಾಟಕದಲ್ಲಿ ಯಶಸ್ಸು ಸಿಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

Related Articles

- Advertisement -spot_img

Latest Articles