ಬೆಂಗಳೂರು: ನಾನು ಕಾಂಗ್ರೆಸ್ಗೆ ಹೋಗುವ ಬಗ್ಗೆ ಯಾವುದೇ ಯೋಚನೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನನ್ನು ಸಂಪರ್ಕಿಸಿಲ್ಲ ಎಂದು ಸಚಿವ ವಿ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬಿಜೆಪಿ ಶಾಸಕ, ನಾನು ಬಿಜೆಪಿಯ ಮಂತ್ರಿ , ಬಿಜೆಪಿಯಲ್ಲಿ ಸಕ್ರೀಯನಾಗಿ ಕೆಲಸ ಮಾಡ್ತಿದ್ದೇನೆ,ಚಿಲ್ಲರೆ ಬುದ್ದಿ ಗೊತ್ತಿಲ್ಲ, ಆಟ ಆಡಿಸೋದು ಗೊತ್ತಿಲ್ಲ ಎಂದು ತಿಳಿಸಿದರು.
ಇನ್ಮುಂದೆ ತೇಜೋವಧೆ ಮಾಡಬೇಡಿ, ಪ್ರಧಾನಿ ಮೋದಿ, ಬೊಮ್ಮಾಯಿ ನಾಯಕತ್ವದಲ್ಲಿ ಕೆಲಸ ಮಾಡುತ್ತೇನೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ, ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ನಾನು ಎಲ್ಲಿಗೂ ಹೋಗಲ್ಲ. ಬಿಜೆಪಿಯಲ್ಲೇ ಇರುತ್ತೇನೆ. ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಮಂತ್ರಿಯಾಗಿ ಯಾರಿಗೂ ಅಪಚಾರ ಮಾಡುವುದಿಲ್ಲ ಎಂದರು.
ಡಿಕೆಶಿ ಸೋಮಣ್ಣ ಫೋಟೋ ವೈರಲ್ ವಿಚಾರವಾಗಿ ಡಿಕೆಶಿ ಪ್ರತಿಕ್ರಿಯಿಸಿ, ನಮ್ಮ ಕೆಲಸ ಮಾಡ್ತಿದ್ದೇವೆ, ಅವರನ್ಯಾಕೆ ಎಳಿತೀರಾ ? ಎಂದು ಪ್ರಶ್ನಿಸಿದ್ದಾರೆ. ಸೋಮಣ್ಣ ಕಾಂಗ್ರೆಸ್ ಗೆ ಬರ್ತೇನೆ ಎಂದು ಹೇಳಿಲ್ಲ, ನಾವು ಕರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯಲ್ಲಿ ನನಗೆ ಗೌರವ ನೀಡಿದ್ದಾರೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡಿದ್ರೆ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ರೆ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಹೇಳಿದರು. ಸಿಎಂ ಬೊಮ್ಮಾಯಿ, ಸಚಿವ ಅಶೋಕ್ ಸೋಮಣ್ಣರ ಮನವೊಲಿಸಲು ಪ್ರಯತ್ನಿಸಿದ್ದರು. ನಂತರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೋಮಣ್ಣ ಮನವೊಲಿಸಲು ಯಶಸ್ವಿಯಾಗಿದ್ದಾರೆ.