ಬಾಕು : ಅಝರ್ಬೈಜಾನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ವಿರುದ್ಧ ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲಸೆನ್ ಜಯ ಸಾಧಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್ ಗುರಿ ಮುಟ್ಟುವಲ್ಲಿ ಪ್ರಜ್ಞಾನಂದ ವಿಫಲರಾಗಿದ್ದಾರೆ.
ಪ್ರಜ್ಞಾನಂದ ಫೈನಲ್ ನಲ್ಲಿ ಸೋತರೂ, ಅವರು ಸಣ್ಣ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಶಿಪ್ ಹಂತಕ್ಕೆ ತಲುಪುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಚೆಸ್ ವಿಶ್ವಕಪ್‌ನಲ್ಲಿ ಪ್ರಜ್ಞಾನಂದ ಅವರು ಗಮನಾರ್ಹ ಪ್ರದರ್ಶನ ತೋರಿದ್ದಕ್ಕಾಗಿ ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ. ಪ್ರಜ್ಞಾನಂದ ತಮ್ಮ ಅಸಾಧಾರಣ ಕೌಶಲ್ಯ ಪ್ರದರ್ಶಿಸಿದ್ದಾರೆ. ಫೈನಲ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್‌ಗೆ ಕಠಿಣ ಪೈಪೋಟಿ ನೀಡಿ ಹೋರಾಡಿದ್ದಾರೆ. ಇದೇನು ಸಣ್ಣ ಸಾಧನೆಯಲ್ಲ. ಅವರ ಮುಂಬರುವ ಪಂದ್ಯಾವಳಿಗಳಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಚೆಸ್ ವರ್ಲ್ಡ್ ಕಪ್ 2023ರಲ್ಲಿ ರನ್ನರ್ ಅಪ್ ಆದ ಯುವ, ಪ್ರತಿಭಾವಂತ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರಿಗೆ ಅಭಿನಂದನೆಗಳು. ವಿಶ್ವಕಪ್ ಫೈನಲ್‌ಗೆ ಅರ್ಹತೆ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ನೀವು ಇತಿಹಾಸ ಸೃಷ್ಟಿಸಿದ್ದೀರಿ. ಪ್ರತಿಯೊಬ್ಬ ಭಾರತೀಯನು ನಿಮ್ಮ ಅದ್ಭುತ ಸಾಧನೆಯ ಬಗ್ಗೆ ಅತ್ಯಂತ ಹೆಮ್ಮೆಪಡುತ್ತಾನೆ. ನಿಮ್ಮ ಸಾಧನೆಯು ಉದಯೋನ್ಮುಖ ಚೆಸ್ ಆಟಗಾರರಿಗೆ ಸ್ಫೂರ್ತಿಯಾಗಿದೆ. ಮುಂದೆ ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
ಚೆಸ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್. ಪ್ರಜ್ಞಾನಂದ ಅವರಿಗೆ ಅಭಿನಂದನೆಗಳು. ಅವರ ಪ್ರತಿಭೆ ಫೈನಲ್ ಪಂದ್ಯಾವಳಿಯಲ್ಲಿ ತೋರ್ಪಡಿಸಿದ್ದಾರೆ. ರನ್ನರ್-ಅಪ್ ಸ್ಥಾನವು ಪ್ರಜ್ಞಾನಂದ ಅವರ ಅತ್ಯುತ್ತಮ ವೃತ್ತಿ ಜೀವನದ ಪ್ರಾರಂಭವಾಗಿದೆ. ಅವರ ಭವಿಷ್ಯಕ್ಕೆ ಶುಭಾಶಯಗಳು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.