ಜೈಪುರ: ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರೇ ನಂಬುವ ದೇವರಿಗೆ ಜೈಕಾರ ಹಾಕುವಾಗ ಅವರು ಜೈ ಸೀತಾರಾಮ್ ಬದಲಿಗೆ ಕೇವಲ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾರೆ. ಇದು ಸೀತಾ ಮಾತೆಗೆ ಅವಮಾನ ಮಾಡಿದಂತೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರನ್ನು ಕೇಳಲು ಬಯಸುತ್ತೇನೆ. ನೀವು ಜೈ ಶ್ರೀರಾಮ್ ಎಂದು ಹೇಳುತ್ತೀರಿ, ಜೈ ಸೀತಾರಾಮ್ ಎಂದು ಏಕೆ ಹೇಳುವುದಿಲ್ಲ? ಸೀತಾ ಮಾತೆಯನ್ನು ಏಕೆ ತೆಗೆದುಹಾಕುತ್ತೀರಿ? ಆಕೆಯನ್ನು ಏಕೆ ಅವಮಾನಿಸುತ್ತೀರಿ? ಮಾತ್ರವಲ್ಲದೇ ಭಾರತದ ಮಹಿಳೆಯನ್ನೇ ನೀವು ಏಕೆ ಅವಮಾನಿಸುತ್ತೀರಿ? ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಮಹಿಳೆಯರನ್ನು ನಿಗ್ರಹಿಸುತ್ತಿದೆ. ಇದಕ್ಕಾಗಿಯೇ ಆರ್‌ಎಸ್‌ಎಸ್ ಸಂಘಟನೆಯಲ್ಲಿ ಯಾವುದೇ ಮಹಿಳಾ ಸದಸ್ಯರಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಯೋಜನೆ ಭಯವನ್ನು ಹರಡುವುದು. ಆದರೆ ನಮ್ಮ ನಿಲುವು ಈ ಭಯ ಹಾಗೂ ದ್ವೇಷದ ವಿರುದ್ಧ ನಿಲ್ಲುವುದಾಗಿದೆ ಎಂದು ತಿಳಿಸಿದರು.
ಆರ್ ಎಸ್ ಎಸ್ ಸಂಘಟನೆಯಲ್ಲಿ ಮಹಿಳೆಯರೇ ಸಿಗುವುದಿಲ್ಲ. ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರೇ ಇಲ್ಲ. ಅವರು ಮಹಿಳೆಯರನ್ನು ನಿಗ್ರಹಿಸುತ್ತಾರೆ. ತಮ್ಮ ಸಂಘಟನೆಗೆ ಮಹಿಳೆಯರು ಪ್ರವೇಶಿಸುವುದನ್ನು ನಿಗ್ರಹಿಸುತ್ತಾರೆ ಎಂದು ಟೀಕಿಸಿದರು.