ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ. ನಾಳೆ ಮಹಿಳೆಯರ ದಿನವಾಗಿದ್ದರಿಂದ ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರು ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು.
ಮಹಿಳೆಯರು ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಯಾವುದೇ ದಾಖಲಾತಿ, ಗುರುತಿನ ಚೀಟಿಯ ಅವಶ್ಯಕತೆ ಇಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 7ರ ಮಧ್ಯರಾತ್ರಿ 12 ಗಂಟೆಯಿಂದ ಮಾರ್ಚ್ 8ರ ಮಧ್ಯರಾತ್ರಿ 12 ಗಂಟೆ ರವರೆಗೆ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಿಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದು.
ವೋಲ್ವೋ, ಎಸಿ ಬಸ್, ವಾಯುವ್ಯ ರಸ್ತೆ ಸಾರಿಗೆ, ಏರ್ಪೋರ್ಟ್ ಬಸ್ ಸೇರಿದಂತೆ ಬಿಎಂಟಿಸಿಯ ಎಲ್ಲ ಮಾದರಿಯ ಬಸ್ನಲ್ಲಿ ಉಚಿತವಾಗಿ ನಾಳೆ ಒಂದು ದಿನ ಮಹಿಳೆಯರು ಪ್ರಯಾಣಿಸಲು ಅವಕಾಶ ಕಲ್ಪಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಮಹಿಳಾ ದಿನಾಚರಣೆಗೆ ಒಂದು ದಿನ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅನುಮತಿ ನೀಡಿ ಎಂದು ಸರ್ಕಾರಕ್ಕೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಪತ್ರ ಬರೆದಿದ್ದರು. ಎಂಡಿ ಸತ್ಯವತಿ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿ ಸೂಚಿಸಿದ್ದಾರೆ.
ಇನ್ನೂ ಸರ್ಕಾರಿ ಹೋಟೆಲ್‌ಗಳಿಗೆ ಭೇಟಿ ನೀಡುವ ಮಹಿಳೆಯರಿಗೆ ಹೋಟೆಲ್‌ಗಳ ರೂಮ್ ಬುಕ್ಕಿಂಗ್‌ಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಿದೆ. ಇದರ ಜೊತೆಗೆ ಫುಡ್ ಮೇಲೂ ಸಹ ಶೇಕಡಾ 20 ರಷ್ಟು ಡಿಸ್ಕೌಂಟ್ ನೀಡಿದೆ.