ಯಾದಗಿರಿ : ನಗರಸಭೆಯ ಸಾಲು ಸಾಲು ಅಕ್ರಮಗಳನ್ನು ಬಯಲಿಗೆಳೆದ ಪೌರಾಯುಕ್ತರನ್ನು ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ. ನಗರಸಭೆ ಆಯುಕ್ತ ಸಂಗಪ್ಪ ಉಪಾಸೆ ಅವರನ್ನು ವರ್ಗಾವಣೆ ಮಾಡಿ ಜಿಲ್ಲಾಧಿಕಾರಿ ಸುಶೀಲಾ ಆದೇಶ ಹೊರಡಿಸಿದ್ದಾರೆ.
ನಗರಸಭೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿ 1,310 ಅನಧಿಕೃತ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಅಲ್ಲದೆ 4 ಕೋಟಿ ರೂ. ಮೌಲ್ಯದ ಆಹಾರ ನಿಗಮದ ಗೌಡೌನ್ ಸೇರಿದಂತೆ 12 ಸರ್ಕಾರಿ ಆಸ್ತಿಗಳ ಅಕ್ರಮ ಖಾತಾ ಮಾಡಿ ಸರ್ಕಾರದ ಬೊಕ್ಕಸಕ್ಕೆ 18.12 ಕೋಟಿ ರೂ. ನಷ್ಟ ಮಾಡಲಾಗಿತ್ತು.
ನಗರಸಭೆಗೆ ಮೂರು ತಿಂಗಳ ಹಿಂದೆ ಆಯುಕ್ತರಾಗಿ ನೇಮಕಗೊಂಡ ಸಂಗಪ್ಪ ಉಪಾಸೆ ಅವರು ಈ ಎಲ್ಲಾ ಅಕ್ರಮಗಳನ್ನು ಬಯಲಿಗೆಳೆದಿದ್ದರು. ಹಗರಣದಲ್ಲಿ ಭಾಗಿಯಾದ ನಗರಸಭೆಯ ಹಿಂದಿನ ಪೌರಾಯುಕ್ತರುಗಳು ಹಾಗೂ ಸಿಬ್ಬಂದಿ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಆಯುಕ್ತರ ದೂರಿನ ಹಿನ್ನೆಲೆ ಅಕ್ರಮ ಖಾತಾ ನಕಲು ಪ್ರಕರಣ ತನಿಖೆಗೆ ಜಿಲ್ಲಾಡಳಿತ ಆದೇಶ ಹೊರಡಿಸಿ ತನಿಖಾ ತಂಡ ರಚಿಸಿತ್ತು.
ಇದನ್ನೂ ಓದಿ : ಕಲಬುರಗಿ : ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್
ಈ ಪ್ರಕರಣದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೆಸರು ಪ್ರಸ್ತಾಪವಾದ ಬೆನ್ನಲ್ಲೇ ನಗರಸಭೆ ಆಯುಕ್ತ ಸ್ಥಾನದಿಂದ ಉಪಾಸೆ ಅವರನ್ನು ಎತ್ತಂಗಡಿ ಮಾಡಲಾಗಿದೆ.
ನಗರದ ಸ್ವಚ್ಛತೆ ಒತ್ತು ಕೊಟ್ಟಿಲ್ಲ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಕಾರಣ ನೀಡಿ ಜಿಲ್ಲಾಧಿಕಾರಿ ಆಯುಕ್ತ ಉಪಾಸೆ ಅವರನ್ನು ವರ್ಗಾವಣೆ ಮಾಡಿದ್ದಾರೆ. ನಗರಸಭೆ ಪೌರಾಯುಕ್ತರ ಸ್ಥಾನದಿಂದ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.