ಮಂಗಳೂರು: ಖ್ಯಾತ ಯಕ್ಷಗಾನ ಮತ್ತು ತಾಳೆ ಮದ್ದಳೆ ಕಲಾವಿದರಾದ, ಮಾಜಿ ಶಾಸಕ ಕುಂಬ್ಳೆ ಸುಂದರರಾವ್ ಇಂದು ಮುಂಜಾನೆ ನಿಧನರಾಗಿದ್ದಾರೆ. ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಬಿ.ಸಿ.ಪಾಟೀಲ್ , ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಸೇರಿ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಯಕ್ಷಗಾನ ತೆಂಕತಿಟ್ಟು ಶೈಲಿಯ ಕಲಾವಿದರಾಗಿದ್ದ ಇವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು. ಕಾರ್ಯರ್ಕಾಡಿ ಕುಂಙಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ರ ಮಾರ್ಚ್ 20ರಲ್ಲಿ ಇವರು ಕೇರಳದ ಕುಂಬಳೆಯಲ್ಲಿ ಜನಿಸಿದರು.ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ 1994ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂಲೇ ಆರಿಸಲ್ಪಟ್ಟ ಶಾಸಕರೆಂಬ ಹೆಗ್ಗಳಿಕೆಗೆ ಇವರು ಪಾತ್ರವಾಗಿದ್ದರು. ಇವರು ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳೂರಿನ ಪಂಪ್‌ವೆಲ್‌ನಲ್ಲಿ ಅವರು ವಾಸವಾಗಿದ್ದರು. ಅಂತ್ಯಸಂಸ್ಕಾರ ಇಂದು ನಡೆಯಲಿದೆ.
ಸುರತ್ಕಲ್ ಹಾಗೂ ಧರ್ಮಸ್ಥಳ ಮೇಳಗಳಲ್ಲಿ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಅವರು ತಮ್ಮ ಪ್ರಾಸಬದ್ಧ , ನಿರರ್ಗಳ ಅರ್ಥಗಾರಿಕೆಯಿಂದ ಮನೆ ಮಾತಾಗಿದ್ದರು. ಶಾಸಕರಾಗಿ, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅವರ ಸೇವೆ ಸ್ಮರಣೀಯ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸು ವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇನ್ನೂ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಯವರು ಸಂತಾಪ ಸೂಚಿಸಿದ್ದು , ಅವರ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ, ಅವರ ಕುಟುಂಬದವರಿಗೆ ದು:ಖ ಭರಿಸುವ ಶಕ್ತಿ ಭಗವಾನ್ ಶ್ರೀ ಜಿನೇಶ್ವರ ಸ್ವಾಮಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಅವರೊಬ್ಬ ಯಕ್ಷಗಾನ ಕಲಾರಂಗದ ಅನುಭವಿ ಅರ್ಥ ದಾರಿ. ತನ್ನದೇ ಚುರುಕಿನ ಅರ್ಥ ಗಾರಿಕೆಯಿಂದ ವೇಷ ಭೂಷಣದಿಂದ ಯಕ್ಷಗಾನ ಲೋಕಕ್ಕೆ ಗೌರವ ತಂದುಕೊಟ್ಟವರು, ಜೊತೆಗೆ ನಿರಂತರವಾಗಿ ಮೂಡುಬಿದಿರೆ ಸ್ವಾಮೀಜಿಗಳಿಂದ ಸನ್ಮಾನಿತಗೊಂಡವರು ಎಂದು ನೆನಪಿಸಿಕೊಂಡಿದ್ದಾರೆ.
ಇನ್ನೂ ಕುಂಬ್ಳೆ ಸುಂದರರಾವ್ ನಿಧನದ ಹಿನ್ನೆಲೆ ಇಂದು ಕಂಬಳ ಪದವಿನಲ್ಲಿ ನಡೆಯಬೇಕಿದ್ದ ಬಿಜೆಪಿ ಸಮಾವೇಶ ಮುಂದೂಡಲಾಗಿದೆ.