ಮಂಡ್ಯ: ತಂದೆ ಮುಖ್ಯಮಂತ್ರಿ ಆಗಬೇಕು, ವರುಣ ಕ್ಷೇತ್ರದಲ್ಲಿ ಅವರ ಗೆಲುವು ಖಚಿತ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಒಬ್ಬ ಮಗನಾಗಿ ತಂದೆ ಸಿಎಂ ಆಗಬೇಕು ಅನ್ನೋ ಆಸೆ ಸಹಜ, ಖಂಡಿತವಾಗಿಯೂ ಅವರು ಸಿಎಂ ಆಗಬೇಕು ಎಂದು ಹೇಳಿದರು. ವರುಣ ಕ್ಷೇತ್ರ ಒಬ್ಬ ನಾಯಕರಿಗೆ ಸೇರಿದ ಕ್ಷೇತ್ರವಲ್ಲ, ಆ ಕ್ಷೇತ್ರ ಮತದಾರರಿಗೆ ಸೇರಿದ್ದು. ನಮ್ಮ ತಂದೆಯವರ ಕೊನೆ ಚುನಾವಣೆ ವರುಣಾದಲ್ಲೇ ನಿಂತು ಗೆಲ್ಲಬೇಕು ಎನ್ನುವುದು ಕಾರ್ಯಕರ್ತರ ಆಸೆ ಎಂದರು.
ಹೈಕಮಾಂಡ್ ಕೂಡ ನಮ್ಮ ತಂದೆಯವರು ವರುಣಾದಲ್ಲಿ ನಿಂತರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಬೇರೆ ಕ್ಷೇತ್ರದಲ್ಲಿ ನಿಂತಿದ್ದರೆ ಅಲ್ಲಿಯ ಟಿಕೆಟ್ ಆಕಾಂಕ್ಷಿಗಳು ಜಾಗ ಬಿಟ್ಟು ಕೊಟ್ಟು ಅವರ ಪರ ಕೆಲಸ ಮಾಡಿರ್ತಾ ಇದ್ರು, ಅದೇ ಕೆಲಸ ನಾನು ಕೂಡ ಮಾಡಿದ್ದೇನೆ, ಸಿದ್ದರಾಮಯ್ಯ ಸಿಎಂ ಆದರೆ ನಮ್ಮ ರಾಜ್ಯ ಅಭಿವೃದ್ಧಿ ಆಗುತ್ತದೆ. ಈ ಎಲ್ಲ ಕಾರಣದಿಂದ ನಮ್ಮ ತಂದೆ ಸಿಎಂ ಆಗಬೇಕು ಎಂದು ಅಭಿಪ್ರಾಯಪಟ್ಟರು.
ನಮ್ಮ ಪಕ್ಷ ಈಗಾಗಲೇ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಘೋಷಣೆ ಮಾಡಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಶೀಘ್ರದಲ್ಲಿ ಮತ್ತಷ್ಟು ಯೋಜನೆಗಳ ಪ್ರಣಾಳಿಕೆ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.