ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಏನು ಬೇಕಾದ್ರೂ ಮಾಡ್ತೇವೆ, ಕರ್ನಾಟಕದ ಹಿತದೃಷ್ಟಿಯಿಂದ ನನ್ನ ತಂದೆ ಸಿಎಂ ಆಗಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರೇ ಮತ್ತೆ ಸಿಎಂ ಆಗಬೇಕು , ಜನತೆ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಈ ಬಾರಿ ಸಿದ್ದರಾಮಯ್ಯ ಸಿಎಂ ಆದರೆ ಬಿಜೆಪಿ ಆಡಳಿತದಲ್ಲಿನ ಯಾವುದೇ ಭ್ರಷ್ಟಾಚಾರ, ದುರಾಡಳಿತ ದೂರ ಮಾಡ್ತಾರೆ, ರಾಜ್ಯದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದರು. 75 ವರ್ಷದ ಸಿದ್ದರಾಮಯ್ಯ ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದು, ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರಿ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಪ್ರಬಲ ನಾಯಕರಾಗಿದ್ದು, ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಲಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಹುದ್ದೆಯತ್ತ ತಮ್ಮ ಗಮನ ಹರಿಸಿದ್ದು ಸಿಎಂ ಹುದ್ದೆ ಯಾರ ಪಾಲಾಗಲಿದೆ ಅನ್ನೋದು ಗೊತ್ತಾಗಬೇಕಿದೆ.