ಹಾಸನ : ಈಗಾಗಲೇ ನಮ್ಮ ಮನೆಗೆ ವಿದ್ಯುತ್ ಅಳವಡಿಸಿದ್ದರ ಬಗ್ಗೆ ಕುಮಾರಸ್ವಾಮಿ ಯವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಒಂದು ವೇಳೆ ನಮ್ಮಿಂದ ಆ ರೀತಿ ತಪ್ಪೇನಾದರೂ ಆಗಿದ್ದರೆ, ನಮ್ಮ ಮನೆಯ ಕೆಲ ಹುಡುಗರಿಂದ ಆಗಿರಬಹುದು ಎನ್ನುವ ಮೂಲಕ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯದ ಜನರ ಕ್ಷಮೆ ಕೇಳಿದ್ದಾರೆ.
ಅದಿ ದೇವತೆ ಹಾಸನಾಂಬೆ ದರ್ಶನ ಪಡೆದ ಬಳಿಕ ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮ್ಮ ಮನೆಯ ಹುಡುಗರಿಂದ ಆ ರೀತಿಯ ಅಚಾತುರ್ಯ ನಡೆದಿರಬಹುದು. ಅದಕ್ಕೆ ಈಗಾಗಲೇ ಕುಮಾರಸ್ವಾಮಿಯವರು ಉತ್ತರ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಗೆದ್ದಿರುವವರು ಪಕ್ಷ ಕಟ್ಟುವ ಕೆಲಸ ಮಾಡುವ ನಾಯಕರಾಗಿದ್ದಾರೆ. ಆದರೆ ಬೇರೆ ಪಕ್ಷಕ್ಕೆ ಹೋಗುವ ನಾಯಕರು ಯಾರೂ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಜನರು ಅವಕಾಶ ಕೊಟ್ಟಿದ್ದಾರೆ ಸರಿಯಾಗಿ ಸರ್ಕಾರ ನಡೆಸಿ; ಕಾಂಗ್ರೆಸ್ ಗೆ ಕೇಂದ್ರ ಸಚಿವ ಜೋಶಿ ಸಲಹೆ
ಶಾಸಕ ಶರಣಗೌಡ ಕಂದಕೂರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಅವರು ಕೆಲ ಬಗೆಯ ಅಸಮಾಧಾನ ಹೊರಹಾಕಿದ್ದಾರೆ. ಎಲ್ಲ ವಿಚಾರವನ್ನೂ ನಾನು ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅವರು ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ದೇವೇಗೌಡರ ನೇತೃತ್ವದಲ್ಲಿ ಎನ್‌ಡಿಎ ಜೊತೆ ಮೈತ್ರಿಯಾಗಿದ್ದೇವೆ. ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಗೆಲ್ಲುವುದೇ ನಮ್ಮ ಗುರಿಯಾಗಿದೆ. ನಾನು ಸ್ಪರ್ಧಿಸುವ ವಿಚಾರ ಈಗ ಅಪ್ರಸ್ತುತ ಎಂದು ತಮ್ಮ ಸ್ಪರ್ಧೆಯನ್ನು ನಿಖಿಲ್ ತಳ್ಳಿ ಹಾಕಿದ್ದಾರೆ.
ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಜಾತ್ಯತೀತ ನಿಲುವಿನ ಮತಗಳು ಕಾಂಗ್ರೆಸ್ ಗೆ ಬರುತ್ತವೆ ಎಂಬ ಮಾಗಡಿ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಮಾತಿಗೆ ರಾಮನಗರದಲ್ಲಿ ಉತ್ತರ ಕೊಡ್ತೇನೆ ಎಂದು ಖಡಕ್ಕಾಗಿ ಟಾಂಗ್ ನೀಡಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ಈ ಬಾರಿ ಪ್ರತಿ ದಿನ ದಿನಕ್ಕೆ ಒಂದರಿಂದ ಒಂದೂವರೆ ಲಕ್ಷ ಭಕ್ತರು ಆಗಮಿಸಿದ್ದಾರೆ. ಶಾಸಕರು ಸೇರಿದಂತೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದಾರೆ. ರಾಜ್ಯದಲ್ಲೇ ಹಾಸನಾಂಬೆ ತಾಯಿಯ ಶಕ್ತಿ ಬಗ್ಗೆ ಚರ್ಚೆ ಆಗುತ್ತಿರುತ್ತದೆ. ಹಚ್ಚಿದ ದೀಪ ಒಂದು ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆ ಈಗಲೂ ಇದೆ ಎಂದು ತಿಳಿಸಿದ್ದಾರೆ.
ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ, ರೈತರ ಪರವಾಗಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಬೇಡಿದ್ದೇನೆ. ನಾನು ಜನಸೇವೆಯನ್ನೇ ದೇವರ ಸೇವೆ ಎಂದುಕೊಂಡಿದ್ದೇನೆ. ಸಿನಿಮಾ ರಂಗದಲ್ಲೂ ಪ್ರತಿ ದಿನ ಶೂಟಿಂಗ್ ಮೊದಲು ಕ್ಯಾಮೆರಾಕ್ಕೆ ನಮಸ್ಕಾರ ಮಾಡುವ ಸಂಸ್ಕ್ರತಿ ಹೊಂದಿದ್ದೇನೆ. ದೇವರ ಮೇಲೆ ನಂಬಿಕೆಯಿಟ್ಟು ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.