ಬೆಂಗಳೂರು: ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಅಭಿಯಾನ ಶುರು ಮಾಡಿದೆ. 18 ರಿಂದ 23 ವರ್ಷ ವಯಸ್ಸಿನ, ಯುವ ಮತದಾರರಿಗೆ ನಿಮ್ಮ ಮೊದಲ ಮತ ಸಂಭ್ರಮಿಸಿ ಅಭಿಯಾನ ಆರಂಭಿಸಲಾಗಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾ ರಾಮಯ್ಯ “ಯುವ ಮತ” ಜಾಲತಾಣ ಲೋಕಾರ್ಪಣೆ ಮಾಡಿದರು. ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ ಹಾಗೂ ಡಿಪ್ಲೊಮೋ ಪಡೆದವರಿಗೆ 1,500 ರೂ ನೀಡುತ್ತಿದೆ. ಈ ಕಾರ್ಯಕ್ರಮದ ನೋಂದಣಿಯನ್ನು ಸಹ “ಯುವ ಮತ” ಅಭಿಯಾನದ ಸಂದರ್ಭದಲ್ಲಿ ಮಾಡಲಾಗುವುದು. ಇದು ಕಾಂಗ್ರೆಸ್ ಪ್ರಮುಖ ಗ್ಯಾರೆಂಟಿಯಾಗಿದೆ.
ಉದ್ಯೋಗವಿಲ್ಲದವರ ತಂದೆ, ತಾಯಿ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಹೀಗಾಗಿ ಸ್ವಾವಲಂಬಿ ಬದುಕು ಸಾಗಿಸಲು ನೆರವು ನೀಡಲಾಗುವುದು. ಜೊತೆಗೆ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರನ್ನು ಪತ್ತೆ ಮಾಡಿ ಅಮೂಲ್ಯ ಮತ ಸಮರ್ಥವಾಗಿ ಬಳಸುವಂತೆ ಅರಿವು ಮೂಡಿಸಲಾಗುವುದು ಎಂದು ತಿಳಿದು ಬಂದಿದೆ.
ಪಕ್ಷ ಇದೀಗ ನೀಡುವ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತೇನೆ. ಬರುವ ದಿನಗಳಲ್ಲಿ ಪಕ್ಷ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತಂತೆ ಪ್ರತಿಕ್ರಿಯಿಸಿದರು.