ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಶಾಸಕ ಭೈರತಿ ಬಸವರಾಜ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ಭೈರತಿ ಬಸವರಾಜ್ ಅವರನ್ನ ವಿಚಾರಣೆ ನಡೆಸುತ್ತಲೇ ಇದ್ದು, ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಬಿಕ್ಲು ಶಿವು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಕಸ್ಟಡಿಯಲ್ಲಿರುವ ಬೈರತಿ ಬಸವರಾಜ್ ಅವರು ಅಧಿಕಾರಿಗಳ ಪ್ರಶ್ನೆಗಳಿಗೆ ಸಂಪೂರ್ಣ ಸೈಲೆಂಟ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾಕ್ಷಿದಾರರು ಮತ್ತು ಇತರ ಆರೋಪಿಗಳ ಹೇಳಿಕೆಗಳ ಆಧಾರದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಬೈರತಿ ಯಾವುದೇ ಪ್ರತಿಕ್ರಿಯೆ ನೀಡದೆ ನನಗೇನೂ ಗೊತ್ತಿಲ್ಲ ಎಂಬ ಉತ್ತರವನ್ನು ಪದೇ ಪದೇ ನೀಡುತ್ತಿದ್ದಾರೆ.
ಇದನ್ನೂ ಓದಿ : ಮಗನಿಗೆ ಟಿಕೆಟ್ ಕೊಡದಿದ್ರೆ ರಾಜೀನಾಮೆ! ದಾವಣಗೆರೆಯಲ್ಲಿ ಜಮೀರ್ v/s ಎಸ್‌ಎಸ್ ಮಲ್ಲಿಕಾರ್ಜುನ್
ಬೈರತಿ ಬಸವರಾಜ್ ಅವರು ಪ್ರಕರಣದಲ್ಲಿ 5ನೇ ಆರೋಪಿಯಾಗಿ ಹೆಸರು ಕೇಳಿ ಬಂದಿದ್ದು, ಕಳೆದ ಶನಿವಾರ ಸಿಐಡಿ ಅವರನ್ನು ಬಂಧಿಸಿತ್ತು. ಸುಪ್ರೀಂ ಕೋರ್ಟ್ ಅಂತರಿಂಗ ಬೇಲ್ ಅರ್ಜಿಯನ್ನು ತಿರಸ್ಕರಿಸಿದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು. ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ, ಫಿಟ್ ಎಂದು ದೃಢಪಡಿಸಿದ ಬಳಿಕ 42ನೇ ಎಸಿಜೆಎಂ ಕೋರ್ಟ್ ಅವರನ್ನು 7 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿತ್ತು. ಇದೀಗ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಭೈರತಿ ಬಸವರಾಜ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.