ಬೆಳಗಾವಿ : ಲಕ್ಷ್ಮಣ್ ಸವದಿ ಬಿಜೆಪಿಗೆ ಮರಳಿ ಬರುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅವರು ಬರುವ ಪ್ರಯತ್ನ ಮಾಡಿದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲಕ್ಷ್ಮಣ್ ಸವದಿ ಅವರು ಬಿಜೆಪಿ ತೊರೆದ ನಂತರ ನಮ್ಮ ನಾಯಕರ ವಿರುದ್ಧ ಮತ್ತು ಕ್ಷೇತ್ರದ ಜನರ ಬಗ್ಗೆ ಆಡಿರುವ ಮಾತುಗಳನ್ನು ಎಲ್ಇಡಿ ಸ್ಕ್ರೀನ್ ಮೂಲಕ ಜನರಿಗೆ ತೋರಿಸುತ್ತೇವೆ. ಅವರು ಬಿಜೆಪಿಗೆ ಬರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿ ಅಥಣಿ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಇದು ಅವರ ಮತ್ತು ಬೆಂಬಲಿಗರ ತಂತ್ರಗಾರಿಕೆ ಅಷ್ಟೇ. ಕಾರ್ಯಕರ್ತರು ಇಂತಹ ಮಾತುಗಳಿಗೆ ಕಿವಿಗೊಡದೆ 2028ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ದೃಷ್ಟಿಯಿಂದ ಸಂಘಟಿತರಾಗಿ ಕೆಲಸ ಮಾಡಬೇಕು ಎಂದರು.
ಯತ್ನಾಳ್ ವಾಪಸಾತಿಗೆ ವೇದಿಕೆ ಸಿದ್ಧ..!
ಇದೇ ವೇಳೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಮಾತನಾಡಿದ ಜಾರಕಿಹೊಳಿ, ಯತ್ನಾಳ್ ಅವರನ್ನು ಮರಳಿ ಬಿಜೆಪಿಗೆ ಕರೆತರುವ ಪ್ರಯತ್ನ ನನ್ನಿಂದ ನಡೆಯುತ್ತಿದೆ. ಈಗಾಗಲೇ ಅದಕ್ಕಾಗಿ ಒಂದು ವೇದಿಕೆ ಸಜ್ಜಾಗಿದೆ. ಬಾಗಲಕೋಟೆಯಲ್ಲಿ ನಮ್ಮ ಅಭ್ಯರ್ಥಿ ಪರ ಯತ್ನಾಳ್ ಪ್ರಚಾರ ಮಾಡಿದ್ದು, ಅವರ ಆಗಮನದಿಂದ ಹಿಂದುತ್ವ ಹಾಗೂ ಪಕ್ಷ ಬಲವರ್ಧನೆಯಾಗಲಿದೆ. ಯತ್ನಾಳ್ ಅವರು ಪಕ್ಷಕ್ಕೆ ಮರಳಿದರೆ ಅದು ನಮಗೆ ದೊಡ್ಡ ಶಕ್ತಿಯಾಗಲಿದೆ ಎಂದರು.
ಇದನ್ನೂ ಓದಿ : ಮುಹೂರ್ತ ಫಿಕ್ಸ್, ಕೆಲವೇ ದಿನಗಳಲ್ಲಿ ಯತ್ನಾಳ್ ಬಿಜೆಪಿಗೆ ವಾಪಸ್; ರಮೇಶ್ ಜಾರಕಿಹೊಳಿ ಹೇಳಿಕೆ
ದಾವಣಗೆರೆ ಮತ್ತು ಬಾಗಲಕೋಟೆಯ ಉಪಚುನಾವಣೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎರಡೂ ಕಡೆ ನಮ್ಮ ಪಕ್ಷದ ಕಾರ್ಯಕರ್ತರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಅಭ್ಯರ್ಥಿಗಳ ಗೆಲುವಿನ ಬಗ್ಗೆ ನಮಗೆ ಸಂಪೂರ್ಣ ಭರವಸೆಯಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ ಎಂದರು.