ಸಿದ್ದರಾಮಯ್ಯ ಬಾದಾಮಿಯಲ್ಲಿ ನನ್ನ ವಿರುದ್ಧ ಗೆದ್ದಿದ್ದು ಕಳ್ಳಮತಗಳಿಂದ : ರಾಮುಲು ಗಂಭೀರ ಆರೋಪ

ಬಾಗಲಕೋಟೆ : ಸಿದ್ದರಾಮಯ್ಯ ಬಾದಾಮಿ ಶಾಸಕರಾಗಿದ್ದಾಗ ಅಭಿವೃದ್ಧಿ ಮಾಡಿಲ್ಲ. ಆ ಚುನಾವಣೆಯಲ್ಲಿ ಕಳ್ಳ ಮತಗಳಿಂದ ನನ್ನ ವಿರುದ್ಧ ಗೆದ್ದಿದ್ದರು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಐದು ದಿನ ಬಿಡಿ, ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಇಲ್ಲಿಯೇ ಇದ್ದರು. ಶಾಸಕ ಆಗಿ ನಮ್ಮ ಭಾಗದಲ್ಲಿ ಗೆದ್ದಿದ್ದರು. ನನ್ನ ವಿರುದ್ಧವೇ 1600 ವೋಟ್ ಗಳಿಂದ ಗೆದ್ದಿದ್ದರು. ಆ 1600 ವೋಟ್ ಗಳು ಕಳ್ಳ ವೋಟ್ ಗಳಾಗಿದ್ದವು. ಯಾಕಂದ್ರೆ ಸಿ.ಎಂ.ಇಬ್ರಾಹಿಂ, ಪಾಟೀಲ್ ಸಾಹೇಬ್ರುಗಳು ಉಸ್ತುವಾರಿಯಾಗಿದ್ದರು. ಅವರು ಏನು ಹೇಳಿದ್ದರು ನೆನಪಿಸಿಕೊಳ್ಳಿ. ಹತ್ತಿರತ್ತಿರ ₹2 ಸಾವಿರ ವೋಟ್ ಗಳನ್ನು ಖರೀದಿ ಮಾಡಿ, ಗೆದ್ದಿದ್ದೀವಿ ಅಂದಿದ್ದರು. ಬಹುಶಃ ಅಂದು ಸಿದ್ದರಾಮಯ್ಯ ಸಾಹೇಬರ ಗೆಲುವು ಅಂತಾನೇ ಅರ್ಥ ಎಂದಿದ್ದಾರೆ.

ಇದನ್ನೂ ಓದಿ : ನೂರಾರು ಕೋಟಿ ಒಡೆಯ ದಳಪತಿ ವಿಜಯ್! ನಾಮಪತ್ರ ಸಲ್ಲಿಕೆ ವೇಳೆ ಘೊಷಿಸಿಕೊಂಡ ಆಸ್ತಿ ಎಷ್ಟು ಗೊತ್ತಾ..?

ಈ ಸಲ ನಾವೂ ಬಿಜೆಪಿಯಲ್ಲಿ ಚರಂತಿಮಠ ಅವರನ್ನು ಗೆಲ್ಲಿಸಬೇಕು ಎಂಬ ವಿಚಾರದಲ್ಲಿ ಎಲ್ಲರೂ ಎಫರ್ಟ್ ಹಾಕ್ತಾ ಇದ್ದೇವೆ. ಚರಂತಿಮಠ್ ಅವರು ಕೂಡ ಬಹಳಷ್ಟು ಒಳ್ಳೊಳ್ಳೆ ಕೆಲಸಗಳನ್ನ ಮಾಡಿದ್ದಾರೆ. 2023ರಲ್ಲಿ ಸೋತಿರಬಹುದು. ಜನರಲ್ಲಿ ಭಾವನೆ ಮೂಡಬಹುದು. ಎರಡೂವರೆ ವರ್ಷಗಳಾಯ್ತಪ್ಪ. ಆದರೂ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಕೇವಲ ಬೇರೆ ಬೇರೆ ಕಾರಣಗಳಿಂದ ಅವರು ಏನು ಮಾಡೋದಕ್ಕೆ ಆಗಿಲ್ಲ. ಈ ಸಲ ಭಾರತೀಯ ಜನತಾ ಪಾರ್ಟಿಯನ್ನು ಕೈ ಹಿಡಿಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ ಎಂದರು.

ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಗೆಲುವಿಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹೆಚ್.ವೈ.ಮೇಟಿ ಅವರ ನಿಧನದಿಂದಾಗಿ ತೆರವಾದ ಬಾಗಲಕೋಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಜೋರಾಗಿಯೇ ನಡೀತಾ ಇದೆ. ಶ್ರೀರಾಮುಲು ಕೂಡ ಬಿಜೆಪಿ ಅಭ್ಯರ್ಥಿ ಚರಂತಿಮಠ ಅವರ ಪರ ಮತಯಾಚನೆ ಮಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಬಾಗಲಕೋಟೆ ಸೋಲಿನ ಭಯ ಇದೆ. ಹೀಗಾಗಿ 5 ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಪ್ರಚಾರ ಮಾಡಿದರೂ ಕಾಂಗ್ರೆಸ್​ ಗೆಲ್ಲುವುದಿಲ್ಲ. ಇಡೀ ಸಚಿವ ಸಂಪುಟ ಸಮೇತ ಬಂದರೂ ಬಿಜೆಪಿ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *