ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರೌಡಿಗಳಿಗೆ, ಉಗ್ರರಿಗೆ ರಾಜಾತಿಥ್ಯ ದೊರೆಯುತ್ತಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಡಲ್ಲಿ ಭಾರೀ ವೈರಲ್ ಆಗಿದೆ. ಈ ಕುರಿತು ಗೃಹ ಸಚಿವ ಪರಮೇಶ್ವರ್ ಅವರು ಜೈಲಿನಲ್ಲಿರುವ ಅವ್ಯವಸ್ಥೆ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹದ್ದನ್ನೆಲ್ಲ ಸಹಿಸಿಕೊಳ್ಳಲು ಆಗಲ್ಲ. ಅಮಾನತು ಮಾಡಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಘಟನೆ ಸಂಬಂಧ ಎಡಿಜಿಪಿ ದಯಾನಂದ್ ಜೊತೆ ಮಾತನಾಡಿದ್ದೇನೆ. ಪ್ರಕರಣವನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದು, ಪೊಲೀಸ್ ಅಧಿಕಾರಿಗಳ ಸಭೆ ಕರೆಯುತ್ತೇನೆ ಎಂದು ಹೇಳಿದರು.
ಈ ಬಗ್ಗೆ ತನಿಖೆ ಮಾಡಿ ವರದಿ ಕೊಡಿ ಅಂತಾ ದಯಾನಂದ್ಗೆ ಹೇಳಿದ್ದೇನೆ. ಪೊಲೀಸ್ ವರದಿ ಸಮಾಧಾನ ತರದಿದ್ದರೆ, ಸಮಿತಿ ಮಾಡಿ ತನಿಖೆ ಮಾಡಲಾಗುತ್ತದೆ. ಉಗ್ರ ಆಗಲಿ ಯಾರೇ ಆಗಲಿ, ಜೈಲಿನಲ್ಲಿ ಕೈದಿಗಳಿಗೆ ಫೋನ್ ಕೊಡುವ ಹಾಗಿಲ್ಲ. ಹೀಗಿರುವಾಗ ಪದೇ ಪದೇ ಈ ರೀತಿ ಯಾಕೆ ಆಗುತ್ತಿದೆ ಎಂದು ಪ್ರಶ್ನಿಸಿದ್ದೇನೆ ಎಂದು ಗರಂ ಆಗಿ ತಿಳಿಸಿದರು.
