ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅರಾಫಿ ನೇಮಕ

ತೆಹ್ರಾನ್ : ಇಡೀ ಮಧ್ಯಪ್ರಚ್ಯಾ ಹೊತ್ತಿ ಉರಿಯುತ್ತಿದೆ. ಇರಾನ್ ವಿರುದ್ಧ ಇಸ್ರೇಲ್ ಅಮೆರಿಕಾ ಮುಗಿಬಿದ್ದಿವೆ. ಈ ಯುದ್ಧದಲ್ಲಿ ಇರಾನ್‌ನ ದೀರ್ಘಕಾಲದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದೆ. ಈ ಬೆನ್ನಲ್ಲೇ ದೇಶದ ಅತ್ಯುನ್ನತ ಸ್ಥಾನಕ್ಕೆ ಅಯತೊಲ್ಲಾ ಅರಾಫಿ ಅವರನ್ನು ಮಧ್ಯಂತರ ಸರ್ವೋಚ್ಚ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ದೀರ್ಘಕಾಲದ ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಅಲಿ ಖಮೇನಿ ನಿಧನವು ಇರಾನ್ ಮಾತ್ರವಲ್ಲದೆ ಇಡೀ ಮಧ್ಯಪ್ರಾಚ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ದೇಶದಲ್ಲಿ ಉಂಟಾಗಬಹುದಾದ ಅಸ್ಥಿರತೆಯನ್ನು ತಡೆಯಲು ಇರಾನ್‌ನ ಪ್ರಭಾವಿ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ತಕ್ಷಣವೇ ಸಭೆ ಸೇರಿ, ಹಿರಿಯ ಧಾರ್ಮಿಕ ವಿದ್ವಾಂಸರಾದ ಅಯತೊಲ್ಲಾ ಅರಾಫಿಗೆ ತಾತ್ಕಾಲಿಕವಾಗಿ ದೇಶದ ಚುಕ್ಕಾಣಿ ವಹಿಸಲು ನಿರ್ಧರಿಸಲಾಗಿದೆ ಎಂದು‌ ಮೂಲಗಳು ತಿಳಿಸಿವೆ.

ಯಾರು ಈ ಅಯತೊಲ್ಲಾ ಅರಾಫಿ? ಅಯತೊಲ್ಲಾ ಅರಾಫಿ ಇರಾನ್‌ನ ಶೈಕ್ಷಣಿಕ ಮತ್ತು ಧಾರ್ಮಿಕ ವಲಯದಲ್ಲಿ ಅತೀವ ಪ್ರಭಾವ ಹೊಂದಿರುವ ವ್ಯಕ್ತಿ. ಈ ಹಿಂದೆ ಇರಾನ್‌ನ ಪ್ರಸಿದ್ಧ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಖಮೇನಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಇವರು, ಈಗ ದೇಶದ ಸಂಕಷ್ಟದ ಸಮಯದಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಇರಾನ್ ತೀವ್ರ ಸಂಘರ್ಷದಲ್ಲಿರುವ ಈ ಸಮಯದಲ್ಲಿ ಖಮೇನಿ ಹತ್ಯೆ ಮತ್ತು ಅರಾಫಿ ಅವರ ನೇಮಕವು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ಇರಾನ್‌ನ ವಿದೇಶಾಂಗ ನೀತಿ ಮತ್ತು ಪರಮಾಣು ಕಾರ್ಯಕ್ರಮಗಳ ಮೇಲೆ ಈ ಬದಲಾವಣೆ ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಇಡೀ ವಿಶ್ವವೇ ಸೂಕ್ಷ್ಮವಾಗಿ ಗಮನಿಸುತ್ತಿದೆ.

Leave a Reply

Your email address will not be published. Required fields are marked *