ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಲು ನಮ್ಮ ಪಕ್ಷದ ಕೆಲ ಮುಖಂಡರೇ ಷಡ್ಯಂತ್ರ ಮಾಡಿದ್ದಾರೆ. ಈ ಷಡ್ಯಂತ್ರದ ನಡುವೆಯೂ ಮುಸ್ಲೀಮರೆಲ್ಲಾ ಸೇರಿ ಕಾಂಗ್ರೆಸ್ಗೆ ಮತ ಚಲಾಯಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಭಾರಿ ಬಹುಮತದಿಂದ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಎಲ್ಲಾ ಅಲ್ಪಸಂಖ್ಯಾತ ನಾಯಕರಿಗೆ ಕ್ಷೇತ್ರದ ಜವಾಬ್ದಾರಿ ನೀಡಿದ್ದರು. ಜೊತೆಗೆ ನನಗೆ ಹಾಗೂ ರಿಜ್ವಾನ್ ಅರ್ಷದ್ ಅವರಿಗೆ ಇತರೆ ಜವಾಬ್ದಾರಿಯನ್ನೂ ನೀಡಿದ್ದರು. ಅದನ್ನು ಸುಸೂತ್ರವಾಗಿ ನಾವು ಮಾಡಿದ್ದೇವೆ. ಆದರೆ ಪಕ್ಷದ ಒಂದಷ್ಟು ಹಿರಿಯ ಮುಖಂಡರು ಪಕ್ಷ ಸೋಲಿಸಲು ದೊಡ್ಡಷಡ್ಯಂತ್ರ ಮತ್ತು ಹುನ್ನಾರ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮಾಹಿತಿಯಿದೆ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ : ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ನಲ್ಲಿ SDPI ಅಭ್ಯರ್ಥಿಗೆ ಜಮೀರ್ ಟೀಂನಿಂದ ₹10 ಕೋಟಿ ನೆರವು, ಹೈಕಮಾಂಡ್ಗೆ ದೂರು..!
ಯಾರು ಏನೇ ಮಾಡಿದರೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಪರ ಮತ ಚಲಾಯಿಸಿದ್ದಾರೆ. ಇದರ ಬಗ್ಗೆ ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯವರಿಗೆ ಮಾಹಿತಿಯಿದೆ. ಎಲ್ಲಾ ಅಲ್ಪಸಂಖ್ಯಾತ ಮುಖಂಡರ ಒಪ್ಪಿಗೆ ಮೇರೆಗೆ ಸಮರ್ಥ್ ಅವರಿಗೆ ಟಿಕೆಟ್ ನೀಡಲಾಯಿತು.
ನಮ್ಮನ್ನೆಲ್ಲ ಕೂರಿಸಿಕೊಂಡು ಒಪ್ಪಿಗೆ ಪಡೆಯಲಾಯಿತು. ಆದರೂ ಒಂದಷ್ಟು ತಪ್ಪು ಗ್ರಹಿಕೆ ಉಂಟಾಯಿತು. ಖ್ವಾಜ ಬಂದೇ ನವಾಜ್ ಗುರುಗಳು ಬಂದು ಕಾಂಗ್ರೆಸ್ ಪರವಾಗಿ ಸಂದೇಶ ನೀಡಿದರು. ಬಿಜೆಪಿಗೆ ಅವಕಾಶ ಸಿಗುವುದು ಬೇಡ ಎಂದಿದ್ದರು. ಜತೆಗೆ ನಾವೆಲ್ಲಾ ಒಟ್ಟಾಗಿ ಪ್ರಚಾರ ಮಾಡಿದ್ದರಿಂದ ಸಮಸ್ಯೆಯಾಗಿಲ್ಲ ಎಂದು ಸಲೀಂ ಅಹಮದ್ ಹೇಳಿದರು.
ದಾವಣಗೆರೆ ಬೈ ಎಲೆಕ್ಷನ್ನಲ್ಲಿ SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರಿಗೆ ಬೆಂಬಲ ನೀಡಿ 10 ಕೋಟಿ ಹಣವನ್ನೂ ನೀಡಿದ್ದಾರೆ ಎಂಬ ಆರೋಪ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಇಬ್ಬರು ಪರಿಷತ್ ಸದಸ್ಯರ ವಿರುದ್ಧ ಕೇಳಿ ಬಂದಿದೆ.