ವಿಜಯಪುರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಶ್ರೀಮಂತರು ಕೈಬಿಡಬೇಕು. ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಕೊಡಬೇಕು ಎಂದು ಸಚಿವ ಎಂ.ಬಿ.ಪಾಟೀಲ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಗ್ಯಾರಂಟಿಗಳನ್ನು ಕೊಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಉಳ್ಳವರು ಶಿವಾಲಯ ಕಟ್ಟುವರಯ್ಯ ಎಂದು ಬಸವಣ್ಣನವರು ಹೇಳಿಲ್ಲವೇ? ಹಾಗೇ ಉಳ್ಳುವರು ಏಕೆ ಸರ್ಕಾರಿ ಸೌಲಭ್ಯ ತೆಗೆದುಕೊಳ್ಳಬೇಕು? ಬಡವರು ಈ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.
ಗ್ಯಾರಂಟಿಗಳನ್ನು ಎಂ.ಬಿ.ಪಾಟೀಲಗೆ ಏಕೆ ಕೊಡಬೇಕು? ಯಾರು ಬಿಪಿಎಲ್ ಕಾರ್ಡ್ ಹೊಂದಿದ್ದಾರೋ ಅವರು ತೆಗೆದುಕೊಳ್ಳಲಿ. ಶ್ರೀಮಂತರು ಏಕೆ ತೆಗೆದುಕೊಳ್ಳಬೇಕು? ಬಿಜೆಪಿಯವರು ಶ್ರೀಮಂತರು ತೆಗೆದುಕೊಳ್ಳಿ ಎನ್ನುತ್ತಾರಾ?. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬೇಕಂತಾ? ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಬೇಕಂತಾ? ಎಂದು ಲೇವಡಿ ಮಾಡಿದರು.
ಗ್ಯಾರಂಟಿ ಯೋಜನೆಗಳನ್ನು ಬಡವರು ಮಾತ್ರ ತೆಗೆದುಕೊಳ್ಳಬೇಕು, ಶ್ರೀಮಂತರು ತೆಗೆದುಕೊಳ್ಳಬಾರದು. ಶ್ರೀಮಂತರು ಅದನ್ನು ಬಿಟ್ಟುಕೊಡಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ರಾಜ್ಯ ಸರ್ಕಾರದ ಮುಂದೆ ಇಂತಹ ಯಾವುದೇ ಪ್ರಸ್ತಾವನೆಗಳು ಇಲ್ಲ. ಈಗ ನನಗೆ ₹2000 ಬೇಕಾ? ಒಟ್ಟಿನಲ್ಲಿ ಈ ಗ್ಯಾರಂಟಿ ಯೋಜನೆಗಳು ಬಡವರಿಗೆ ಸಿಗಬೇಕು. ಶ್ರೀಮಂತರಿಗೆ ಸಿಗಬಾರದು ಎಂದು ಸಚಿವರು ಹೇಳಿದರು.