ಶಶಿ ತರೂರ್ ಕಾಂಗ್ರೆಸ್ ತೊರೆಯೋದು ಬಹುತೇಕ ಖಚಿತ..!?

ನವದೆಹಲಿ : ಕಾಂಗ್ರೆಸ್ ಸಂಸದ ಶಶಿ ತರೂರ್‌ ಅವರು ಪಕ್ಷ ತೊರೆಯುವುದು ಬಹುತೇಕ ಖಚಿತ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡ್ತಿದೆ. ನಾಲ್ಕು ಬಾರಿ ಸಂಸದರಾಗಿರುವ ತರೂರ್‌ ಅವರು ಕಾಂಗ್ರೆಸ್‌‍ ಪಕ್ಷದ ಮುಂಚೂಣಿ ನಾಯಕರಾಗಿದ್ದರು. ಆದ್ರೆ ಅವರು ಇತ್ತಿಚೆಗೆ ನಡೆದ ಪಕ್ಷದ ಹಲವಾರು ಮಹತ್ವದ ಸಭೆಗಳಿಂದ ದೂರು ಉಳಿದಿರುವುದನ್ನು ನೋಡಿದರೆ ಅವರು ಕೇರಳ ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷ ತೊರೆಯುವ ಸಾಧ್ಯತೆಗಳು ದಟ್ಟವಾಗುತ್ತಿದೆ.

ಇನ್ನು ಶಶಿ ತರೂರ್‌ ಅವರ ತವರು ರಾಜ್ಯವಾದ ಕೇರಳದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಒಂದುವೇಳೆ ಅವರು ಕಾಂಗ್ರೆಸ್‌‍ ತೊರೆಯಲು ಯೋಚಿಸಿದ್ದರೆ, ಚುನಾವಣೆಗೆ ಮೊದಲೇ ಕೈ ತೊರೆಯುವ ಸಾಧ್ಯತೆಯಿದೆ. ಆದರೆ ಈ ಊಹಾಪೋಹಗಳನ್ನು ನಿರಾಕರಿಸಿರುವ ಅವರು ತಮ್ಮ ವೃದ್ಧ ತಾಯಿಯೊಂದಿಗೆ ಕೇರಳದಲ್ಲಿದ್ದ ಕಾರಣ ಸಭೆಗಳಿಗೆ ಗೈರಾಗಿದ್ದೇನೆ ಎಂದಿದ್ದಾರೆ.

ನಿನ್ನೆ ಸಂಜೆಯಷ್ಟೇ ಕಾಂಗ್ರೆಸ್‌‍ನ ಉನ್ನತ ನಾಯಕರು ಪಕ್ಷದ ಸಂಸದೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನೆಯಲ್ಲಿ ಸಭೆ ಸೇರಿ ಇಂದು ಪ್ರಾರಂಭವಾದ ಚಳಿಗಾಲದ ಅಧಿವೇಶನದ ಕಾರ್ಯತಂತ್ರವನ್ನು ಚರ್ಚಿಸಿದರು. ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌‍ ಸಂಸದೀಯ ಪಕ್ಷದ ಸದಸ್ಯರು ಹಾಜರಿದ್ದರು. ಆದರೆ ತರೂರ್‌ ಗೈರುಹಾಜರಾಗಿದ್ದರು.

ಮೇಲಾಗಿ ಶಶಿ ತರೂರ್‌ ಗೈರುಹಾಜರಾದ ಎರಡನೇ ನಿರ್ಣಾಯಕ ಪಕ್ಷದ ಸಭೆ ಇದಾಗಿತ್ತು. ಇದಕ್ಕೂ ಮೊದಲು, ನವೆಂಬರ್‌ 18 ರಂದು, ವಿಶೇಷ ತೀವ್ರ ಪರಿಷ್ಕರಣೆ ವಿಷಯದ ಕುರಿತು ಸರ್ಕಾರವನ್ನು ಮೂಲೆಗುಂಪು ಮಾಡುವ ಪಕ್ಷದ ಯೋಜನೆಗಳನ್ನು ಚರ್ಚಿಸಲು ಗಾಂಧಿ ಮತ್ತು ಖರ್ಗೆ ಕರೆದಿದ್ದ ಸಭೆಗೆ ಅವರು ಗೈರುಹಾಜರಾಗಿದ್ದರು.

ತರೂರ್‌ ಆಗ ತಾವು ಅಸ್ವಸ್ಥರಾಗಿರುವುದಾಗಿ ತಿಳಿಸಿದ್ದರು. ಆದಾಗ್ಯೂ, ಹಿರಿಯ ನಾಯಕ ಹಿಂದಿನ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಉಪನ್ಯಾಸದಲ್ಲಿ ಭಾಗವಹಿಸಿದ್ದರು. ಪ್ರಧಾನಿ ಮೋದಿ ಅವರ ಭಾಷಣವನ್ನು ಅವರು ಹೊಗಳಿದ್ದು, ಅದರಲ್ಲಿ ಅವರು ಕಾಂಗ್ರೆಸ್‌‍ ಅನ್ನು ಗುರಿಯಾಗಿಸಿಕೊಂಡು ಮಾಡಿರುವುದು ಹುಬ್ಬೇರಿಸಿದೆ.

Leave a Reply

Your email address will not be published. Required fields are marked *