ತುಮಕೂರು : ಇತ್ತೀಚಿಗೆ ರೈತರು ಹಾಗೂ ರೈತರ ಮಕ್ಕಳಿಗೆ ಮದುವೆ ಆಗಲು ಹುಡುಗಿಯರು ಸಿಗುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡು ಇರುವವರಿಗೆ ಹೆಣ್ಣು ಕೊಡಲು ಮುಂದೆ ಬರುವವರೇ ಇಲ್ಲ ಎನ್ನುವ ಹಂತಕ್ಕೆ ಸಮಾಜ ತಲುಪಿದೆ. ಪ್ರತೀ ಹೆಣ್ಣು ಹತ್ತರವರೂ ಸರ್ಕಾರಿ ನೌಕರಿ ಅಥವಾ ಸಿಟಿ ವಾಸ ಇರುವ ಗಂಡನ್ನೇ ಬಯಸುತ್ತಾರೆ. ಈ ನಡುವೆ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಹೆಚ್.ಡಿ.ರಂಗನಾಥ್ ಅವರು ಸಿಎಂ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರವೊಂದು ಸಾಮಾಜಿ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಶಾಸಕರು ಬರೆದ ಪತ್ರದಲ್ಲೇನಿದೆ..!?
ಕುಣಿಗಲ್ ಶಾಸಕರು ಸಿಎಂ ಸಿದ್ದರಾಮಯ್ಯ ವಿಭಿನ್ನ ಪತ್ರವೊಂದನ್ನ ಬರೆದು ಗಮನ ಸೆಳೆದಿದ್ದಾರೆ. ಕೃಷಿಯಲ್ಲಿ ತೊಡಗಿರುವ ತಾಲ್ಲೂಕಿನ ಗಂಡು ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ಸ್ಥಾನಮಾನ ಘೋಷಿಸುವಂತೆ ಆಗ್ರಹಿಸಿದ್ದಾರೆ. ನನ್ನ ಮತ ಕ್ಷೇತ್ರ ಕುಣಿಗಲ್ ತಾಲ್ಲೂಕು ಗ್ರಾಮೀಣ ಪ್ರದೇಶವಾಗಿದ್ದು, ವ್ಯವಸಾಯ ಅವಲಂಭನೆ ಹೆಚ್ಚಿದೆ. ಹೀಗಾಗಿ ಗ್ರಾಮಗಳಲ್ಲಿ ಹೆಚ್ಚಿನ ಯುವಕರು ವಾಸವಿದ್ದು, ಅವರು ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಇವರನ್ನು ಮದುವೆ ಆಗಲು ಹೆಣ್ಣು ಮಕ್ಕಳು ನಿರಾಕರಿಸುತ್ತಿದ್ದು, ಮೂವತ್ತು ವರ್ಷ ದಾಟಿದರೂ ಅವರ ವಿವಾಹ ನಡೆಯುತ್ತಿಲ್ಲ. ಹೀಗಾಗಿ ಅವರು ತೊಂದರೆಗೆ ಸಿಲುಕಿದ್ದು, ವ್ಯವಸಾಯ ಮಾಡಿಕೊಂಡಿರುವವರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ, ವಿಶೇಷ ಸ್ಥಾನಮಾನವನ್ನು ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.