ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರರಿದ್ದಾರೆ ಹೇಳಿ? ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್

ಬೆಂಗಳೂರು : ಸದಾ ಒಂದಿಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಮಾಜಿ ಸಚಿವ ಕೆ.ಎನ್‌.ರಾಜಣ್ಣರ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಕಮಿಷನ್‌ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಪರವಾಗಿ ಮಾತನಾಡಿದ್ದು, ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜಣ್ಣ, ನಾವು ಆತನ ಬಗ್ಗೆ ಮರುಕ ವ್ಯಕ್ತಪಡಿಸಬೇಕು ಅಷ್ಟೇ. ಸತ್ಯಹರಿಶ್ಚಂದ್ರನ ಮಕ್ಕಳು ಯಾರು ಇದ್ದಾರೆ ಹೇಳಿ ನೋಡೋಣ. ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರ ಇದ್ದಾರೆ. ಇವನ್ಯಾರೋ ಬಡಪಾಯಿ ಸಿಕ್ಕಿ ಹಾಕಿಕೊಂಡಿದ್ದಾನೆ ಅಷ್ಟೇ ಎಂದು ಸಮರ್ಥಿಸಿಕೊಂಡರು. ಈ ಹಿಂದೆ ಇದೇ ರಾಜಣ್ಣ ಅವರು ರಾಹುಲ್ ಗಾಂಧಿ ಆರಂಭಿಸಿದ ವೋಟ್ ಚೋರಿ ಅಭಿಯಾನವನ್ನು ಪರೋಕ್ಷವಾಗಿ ಟೀಕಿಸಿ ವಿವಾದ ಹುಟ್ಟುಹಾಕಿದ್ರು.

ರಾಜಣ್ಣರ ವಿವಾದಗಳು ಒಂದೆರಡಲ್ಲ..!
2024ರ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದಾಗ ಮತಗಳ್ಳತನವನ್ನೇಕೆ ತಡೆಯಲಾಗಲಿಲ್ಲ ಎಂದು ಪ್ರಶ್ನಿಸಿದ್ದರು. ಇದು ಪಕ್ಷಕ್ಕೆ ಅಸಮಾಧಾವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಸೂಚನೆಯ ಮೇರೆಗೆ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕಾಯಿತು. ಈ ನಡುವೆ ಸಚಿವ ಸ್ಥಾನದಿಂದ ಹೊರಬಂದ ನಂತರ ರಾಜಣ್ಣ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ರಾಜಣ್ಣ ಅವರು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಶನಿವಾರ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಸೋಮಣ್ಣ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ರಾಜಣ್ಣ ಸಹಾಯ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬೇಕಿದೆ. ಆದರೆ ಈ ಭೇಟಿ ಕುರಿತು ಸ್ಪಷ್ಟನೆ ನೀಡಿರುವ ರಾಜಣ್ಣ ಅವರು, ನನ್ನ ಕ್ಷೇತ್ರ ಮಧುಗಿರಿಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಮನವಿ ಪತ್ರ ಸಲ್ಲಿಸಲು ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *