ಇರಾನ್ : ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷವು 12ನೇ ದಿನಕ್ಕೆ ಕಾಲಿಟ್ಟಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತುತ್ತತುದಿಗೆ ತಲುಪಿದೆ. ತೈಲ ಬೆಲೆ ಗಗನಕ್ಕೇರಿದೆ. ಈ ಬಿಸಿ ಭಾರತಕ್ಕೂ ತಟ್ಟಿದೆ. ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ನ ಆಹಾಕಾರ ಶುರುವಾಗಿದೆ. ಈ ನಡುವೆ ಇರಾನ್ನ ನೂತನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಯುದ್ಧವನ್ನು ಕೊನೆಗೊಳಿಸುವ ಮಾತನ್ನಾಡಿದ್ದಾರೆ. ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟು ಅವುಗಳಿಗಾಗಿ ಒಪ್ಪಿದ್ರೆ ಯುದ್ಧ ನಿಲ್ಲಿಸುವುದಾಗಿ ಹೇಳಿದ್ದಾರೆ.
ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಮಾತನಾಡಿದ ಪೆಜೆಶ್ಕಿಯಾನ್, ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಇರಾನ್ ಬದ್ಧವಾಗಿದೆ. ಆದರೆ, ಯುದ್ಧ ನಿಲ್ಲಲು ನಮ್ಮ ಮೂರು ಷರತ್ತುಗಳನ್ನು ಅಮೆರಿಕ ಹಾಗೂ ಇಸ್ರೇಲ್ ಪಾಲಿಸುವುದು ಅತ್ಯಗತ್ಯ ಎಂದು ಹೇಳಿಕೊಂಡಿದ್ದಾರೆ.
ಇರಾನ್ನ ಮೂರು ಷರತ್ತುಗಳೇನು..?
ಇರಾನ್ನ ಕಾನೂನುಬದ್ಧ ಹಕ್ಕುಗಳನ್ನು ಮಾನ್ಯ ಮಾಡಬೇಕು. ಯುದ್ಧದಿಂದಾದ ನಷ್ಟಕ್ಕೆ ಪರಿಹಾರವನ್ನ ಎರೆಡೂ ದೇಶಗಳು ಪಾವತಿಸಬೇಕು. ಭವಿಷ್ಯದಲ್ಲಿ ಇರಾನ್ ಮೇಲೆ ಯಾವುದೇ ಆಕ್ರಮಣ ನಡೆಯದಂತೆ ಅಂತರಾಷ್ಟ್ರೀಯ ಗ್ಯಾರಂಟಿ ನೀಡಬೇಕು. ಈ ಮೂರು ಷರತ್ತುಗಳಿಗೆ ಒಪ್ಪುವುದಾದರೆ, ಇರಾನ್ ಯುದ್ಧ ನಿಲ್ಲಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ. “ಅಮೆರಿಕ ಮತ್ತು ಜಿಯೋನಿಸ್ಟ್ ಆಡಳಿತ ಹಚ್ಚಿದ ಈ ಬೆಂಕಿಯನ್ನು ನಂದಿಸಲು ಇದೊಂದೇ ದಾರಿ” ಎಂದು ಹೇಳಿದ್ದಾರೆ.
ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ನ ಕಮಾಂಡರ್-ಇನ್-ಚೀಫ್ ಸಲಹೆಗಾರ ಅಲಿ ಫದವಿ ಮಾತನಾಡಿ, “ಅಮೆರಿಕ ಮತ್ತು ಇಸ್ರೇಲ್ ದೀರ್ಘಕಾಲ ಯುದ್ಧಕ್ಕೆ ಸಿದ್ಧವಾಗಲೇಬೇಕು. ಈ ಯುದ್ಧವು ಇಡೀ ಅಮೆರಿಕದ ಆರ್ಥಿಕತೆ ಮತ್ತು ವಿಶ್ವದ ಆರ್ಥಿಕತೆಯನ್ನೇ ನಾಶಪಡಿಸಲಿದೆ” ಎಂದು ಎಚ್ಚರಿಸಿದ್ದಾರೆ. ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ಎಲ್ಪಿಜಿ ಪೂರೈಕೆಯ ಶೇ. 20ರಷ್ಟು ಭಾಗ ಸಾಗುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಎರಡು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿವೆ.
ಲೈಬೀರಿಯಾ ಧ್ವಜದ ‘ಎಕ್ಸ್ಪ್ರೆಸ್ ರೋಮ್’ ಮತ್ತು ಥೈಲ್ಯಾಂಡ್ನ ‘ಮಯೂರಿ ನಾರಿ’ ಹಡಗುಗಳು ಇರಾನ್ ಪಡೆಯ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜಲಸಂಧಿಯನ್ನು ಪ್ರವೇಶಿಸಿದ್ದರಿಂದ ಅವುಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಟೆಹ್ರಾನ್ ತಿಳಿಸಿದೆ. ಓಮನ್ ನೌಕಾಪಡೆಯು 20 ಸಿಬ್ಬಂದಿಯನ್ನು ರಕ್ಷಿಸಿದ್ದು, ಇನ್ನೂ ಮೂವರು ನಾವಿಕರು ಕಾಣೆಯಾಗಿದ್ದಾರೆ.